ಇದ್ಲಿಬ್, ಮಾ.7-ರಷ್ಯಾದ ಸೇನೆಗೆ ಸೇರಿದ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಎಲ್ಲ 39 ಮಂದಿ ಸಾವಿಗೀಡಾದ ದುರಂತ ಸಿರಿಯಾದ ಹೀಮಿಮ್ ವಾಯುನೆಲೆಯಲ್ಲಿ ನಿನ್ನೆ ಸಂಭವಿಸಿದೆ.
ಈ ವಿಮಾನದಲ್ಲಿ 6 ಸಿಬ್ಬಂದಿ ಮತ್ತು 33 ಯೋಧರು ಇದ್ದರು. ತಾಂತ್ರಿಕ ದೋಷದಿಂದ ವಾಯು ನೆಲೆಯಲ್ಲಿ ಭೂಸ್ಪರ್ಶ ಮಾಡುವಾಗ ವಿಮಾನ ಪತನಗೊಂಡಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ವಿಮಾನವು ಇಳಿಯುತ್ತಿದ್ದಾಗ ರನ್ವೇನಿಂದ 500 ಮೀಟರ್ಗಳ ದೂರದಲ್ಲಿ ಪತನಗೊಂಡಿತು. ಇದರಲ್ಲಿದ್ದ ಎಲ್ಲರೂ ಸೇನೆಗೆ ಸೇರಿದವರಾಗಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ತಾಂತ್ರಿಕ ದೋಷದಿಂದ ವಿಮಾನ ಅಪಘಾತಕ್ಕೀಡಾಗಿ ಈ ದುರ್ಘಟನೆ ಸಂಭವಿಸಿದೆ.
ಇದು ಆಂಟೋನೊವ್-26 ವಿಮಾನಗಳಲ್ಲಿ ಒಂದಾಗಿದ್ದು, ರಷ್ಯಾದಲ್ಲಿ ಉಗ್ರಗಾಮಿಗಳ ವಿರುದ್ಧದ ಹೋರಾಟಕ್ಕಾಗಿ ಯೋಧರು ಮತ್ತು ಅಗತ್ಯ ಸರಕುಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿತ್ತು. ಈ ವಿಮಾನ ಪತನ ಮತ್ತು ಸಿಬ್ಬಂದಿ-ಯೋಧರ ಸಾವಿನಿಂದ ರಷ್ಯಾಕ್ಕೆ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.