ಕೊಡಗು,ಮಾ.7-ಜಿಲ್ಲೆಯಲ್ಲಿ ಹುಲಿರಾಯನ ಆರ್ಭಟಕ್ಕೆ ಹಸುವೊಂದು ಬಲಿಯಾಗಿರುವ ಘಟನೆ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಮಲ್ದಾರೆ ಗ್ರಾಮದ ಬಳಿ ಹುಲಿ ಆಗಾಗ ಕಾಣಿಸಿಕೊಳುತಿತ್ತು. ಇದರಿಂದ ಜನರು ಆತಂಕಕ್ಕೀಡಾಗಿದ್ದರು. ಈ ನಡುವೇ ಹುಲಿಯು ಇಂದು ಬೆಳಗ್ಗೆ ಹಸುವಿನ ಮೇಲೆ ದಾಳಿ ನಡೆಸಿ ಎಳೆದೊಯ್ದು ತಿಂದು ಹಾಕಿದೆ.
ಹಸುವಿನ ಅಳಿದುಳಿದ ದೇಹ ಶ್ರೀನಿವಾಸ ಎಸ್ಟೇಟ್‍ವೊಂದರಲ್ಲಿ ಪತ್ತೆಯಾಗಿದೆ. ಇದರಿಂದ ಆತಂಕಗೊಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಹುಲಿಯ ಹೆಜ್ಜೆಗುರುತು ಪತ್ತೆಯಾಗಿದೆ.
ಇಲ್ಲಿ ಆಗಾಗ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು, ಜನಜಾನುವಾರುಗಳು ಬದುಕಲು ಕಷ್ಟವಾಗುತ್ತಿದೆ. ಹೊರಗಡೆ ಓಡಾಡಲು ಭಯವಾಗುತ್ತಿದೆ. ಪ್ರಾಣವನ್ನು ಕೈಯಲ್ಲಿಡುದು ದಿನ ಕಳೆಯುವಂತಾಗಿದೆ ನಮ್ಮ ಪರಿಸ್ಥಿತಿ ಎಂದು ಗ್ರಾಮಸ್ಥರು ದೂರಿದ್ದಾರೆ.
ಆದಷ್ಟು ಬೇಗ ಹುಲಿಯನ್ನು ಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.