ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ
ಬೆಂಗಳೂರು, ಮಾ.7- ಲೋಕಾಯುಕ್ತ ಕಚೇರಿಯಲ್ಲಿಯೇ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಇಂದು ಮಧ್ಯಾಹ್ನ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ಶೆಟ್ಟಿ ಅವರನ್ನು ಚಿಕಿತ್ಸೆಗೆ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಮತ್ತು ಗನ್ಮ್ಯಾನ್ಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಅರೋಪಿ ತೇಜಸ್ ಶರ್ಮಾನನ್ನು ಬಂಧಿಸಿದ್ದಾರೆ.
ತುಮಕೂರಿನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ ಎಂದು ಹೇಳಲಾಗಿರುವ ತೇಜಸ್ ಶರ್ಮಾ ಲೋಕಾಯುಕ್ತದಲ್ಲಿ ಸುಮಾರು 18 ಪ್ರಕರಣಗಳನ್ನು ದಾಖಲಿಸಿದ್ದಾನೆ ಎಂಬ ಮಾಹಿತಿ ಇದೆ.
ಬಹುತೇಕ ಪ್ರಕರಣಗಳು ವಿಚಾರಣೆ ವೇಳೆ ವಜಾಗೊಳಿಸಲ್ಪಟ್ಟಿದ್ದರಿಂದ ಹತಾಶನಾಗಿ ಈ ದುಷ್ಕøತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.
ಲೋಕಾಯುಕ್ತರನ್ನು ಭೇಟಿ ಮಾಡಲು ಕಳೆದೆರಡು ದಿನಗಳಿಂದ ಪ್ರಯತ್ನ ಪಟ್ಟಿದ್ದ ತೇಜಸ್ಗೆ ಅವಕಾಶ ಸಿಕ್ಕಿರಲಿಲ್ಲ. ಇಂದು ಮಧ್ಯಾಹ್ನ 1.40ರ ಸುಮಾರಿನಲ್ಲಿ ವಕೀಲ ಕುಮಾರ್ ಎಂಬ ಹೆಸರಿನಲ್ಲಿ ಪ್ರವೇಶ ವಿವರದ ಪುಸ್ತಕದಲ್ಲಿ ನಮೋದಿಸಿದ್ದಾನೆ. ನಂತರ ಲೋಕಾಯುಕ್ತರ ಕಚೇರಿ ಒಳಗೆ ಹೋಗಿದ್ದಾನೆ. ಮುಂದಿನ ಎರಡು ದಿನಗಳಲ್ಲಿ ಲೋಕಾಯುಕ್ತದ ಮಹತ್ವದ ಸಭೆ ನಡೆಯಲಿದ್ದು, ವಿಶ್ವನಾಥ್ ಶೆಟ್ಟಿ ಅವರು ಅದರ ತಯಾರಿ ನಡೆಸುತ್ತಿದ್ದರು. ಒಳ ಹೋದ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇದರಿಂದ ಆಘಾತಗೊಂಡ ಲೋಕಾಯುಕ್ತರು ಕಿರುಚಾಡಿದ್ದು, ತಕ್ಷಣ ಸಹಾಯಕ ಸಿಬ್ಬಂದಿಗಳು ಒಳ ನುಗ್ಗಿ ಆರೋಪಿಯನ್ನು ಹಿಡಿದುಕೊಂಡಿದ್ದಾರೆ.
ತೇಜಸ್ ಶರ್ಮಾ ಮಾಡಿದ ಮೊದಲ ಇರಿತದ ಪ್ರಯತ್ನದಿಂದ ವಿಶ್ವನಾಥ್ ಶೆಟ್ಟಿ ಅವರ ಕೈಗೆ ಗಾಯವಾಗಿದೆ. ಒಟ್ಟು ಮೂರು ಬಾರಿ ಇರಿದಿದ್ದು, ಹೊಟ್ಟೆಯ ಪಕ್ಕೆ ಜಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಉಳಿದೆರಡು ಪ್ರಯತ್ನದಲ್ಲಿ ಕೈಗಳಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ತಕ್ಷಣವೇ ವಿಶ್ವನಾಥ್ ಶೆಟ್ಟಿ ಅವರನ್ನು ಸಮೀಪದಲ್ಲೇ ಇರುವ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಧಾನಸೌಧ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ತನಿಖೆ ಮುಂದುವರೆದಿದ್ದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ವಿಚಾರಣೆ ತೀವ್ರಗೊಳಿಸಿದ್ದು, ಆತನ ಹಿನ್ನೆಲೆ, ಮಾನಸಿಕ ಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ತೇಜೆಸ್ ಅನ್ಯರಾಜ್ಯದವನೆಂದು ಹೇಳಲಾಗಿದ್ದು, ಸಮಾಜ ಕಲ್ಯಾಣ ಇಲಾಖೆಗೆ ಕುರ್ಚಿ ಮೇಜು ಪೂರೈಸುವ ಗುತ್ತಿಗೆ ಪಡೆಯಲು ಪ್ರಯತ್ನಿಸಿ ವಿಫಲನಾಗಿದ್ದ ಎನ್ನಲಾಗಿದೆ. ಜೊತೆಗೆ ರಾಜ್ಯ ಮಹಾಲೇಖಪಾಲಕರು ಸೇರಿದಂತೆ ಹಲವರ ಮೇಲೆ ಲೋಕಾಯುಕ್ತದಲ್ಲಿ ಕೇಸು ದಾಖಲಿಸಿದ್ದಾನೆ. ಆರ್ಟಿಐ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.