ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಊಟ
ಬೆಂಗಳೂರು, ಮಾ.6- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಒಂದು ದಿನ ಉಚಿತ ಊಟ ವಿತರಿಸಲು ಬಿಬಿಎಂಪಿ ತೀರ್ಮಾನಿಸಿದೆ.
ಪಾಲಿಕೆ ಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೇಯರ್ ಸಂಪತ್ರಾಜ್ ಅವರು ಈ ಘೋಷಣೆ ಮಾಡಿದರು.
ಎಲ್ಲಾ 198 ವಾರ್ಡ್ಗಳಲ್ಲಿರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಮಾ.8ರಂದು ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಉಚಿತವಾಗಿ ನೀಡಲು ತೀರ್ಮಾನಿಸಿದ್ದೇವೆ ಎಂದರು.
ಈಗಾಗಲೇ ಮಹಿಳಾ ಸದಸ್ಯರಿಗಾಗಿ ಪಿಂಕ್ ಅವರ್, ಪಿಂಕ್ ಟಾಯ್ಲೆಟ್, ಪಿಂಕ್ ಪಾರ್ಕಿಂಗ್ ಸೇರಿದಂತೆ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿರುವ ಮೇಯರ್ ಸಂಪತ್ರಾಜ್ ಅವರು ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಒಂದು ದಿನ ಉಚಿತ ಊಟ ನೀಡುವ ಮೂಲಕ ಮತ್ತೊಂದು ಬಂಪರ್ ಕೊಡುಗೆ ನೀಡಿದ್ದಾರೆ.
ಕಳೆದ 28ರಂದು ಮಂಡನೆಯಾದ ಬಿಬಿಎಂಪಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದ್ದು , ಪ್ರತಿ ಪಕ್ಷ ನಾಯಕ ಪದ್ಮನಾಭ ರೆಡ್ಡಿ ಅವರು ನಿನ್ನೆಯಿಂದ ಸಭೆಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಮಹತ್ವದ ಚರ್ಚೆಯಲ್ಲಿ ಪಾಲ್ಗೊಳ್ಳಲು ಸದಸ್ಯರು ನಿರಾಸಕ್ತಿ ತೋರುತ್ತಿರುವುದರಿಂದ ಸಭೆ ಭಣಗುಡುತ್ತಿದೆ.