ವಾಷಿಂಗ್ಟನ್, ಮಾ.6-ಪಾಕಿಸ್ತಾನಕ್ಕೆ ಎರಡು ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತಗೊಳಿಸಿ ಎರಡು ತಿಂಗಳಾಗಿದ್ದರೂ ಆ ದೇಶದ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳದ ಇಸ್ಲಾಮಾಬಾದ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಎಚ್ಚರಿಕೆ ನೀಡಿ ಆರ್ಥಿಕ ನೆರವು ಸ್ಥಗಿತಗೊಳಿಸಿದೆ. ಇಷ್ಟಾದರೂ ಆ ದೇಶಕ್ಕೆ ಇನ್ನೂ ಬುದ್ದಿ ಬಂದಿಲ್ಲ. ಅದರ ನಡವಳಿಕೆಯಲ್ಲಿ ನಿರ್ಣಾಯಕ ಮತ್ತು ಪೂರಕ ಬದಲಾವಣೆಗಳು ಕಂಡುಬಂದಿಲ್ಲ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿದೇಶಾಂಗ ಇಲಾಖೆಯ ಮುಖ್ಯ ಉಪ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.