ಗೌರಿಬಿದನೂರು, ಮಾ.6- ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕಿದೆ.
ತಾಲ್ಲೂಕಿನ ಚನ್ನರಾಯನಹಳ್ಳಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಆಗಾಗ್ಗೆ ಗ್ರಾಮಕ್ಕೆ ನುಗ್ಗಿ ಕುರಿ, ಮೇಕೆ ಹಾಗೂ ನಾಯಿಗಳನ್ನು ಭಕ್ಷಿಸುತ್ತಿತ್ತು.
ಇದರಿಂದ ರೈತರು ಆತಂಕಕ್ಕೀಡಾಗಿ ರಾತ್ರಿಯಿಡಿ ಜಾಗರಣೆ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಕೆಗೆ ಮನವಿ ಮಾಡಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿಗಳು ರಾಮಪ್ಪ ಎಂಬುವರ ಕುರಿ ಕೊಪ್ಪಲು ಬಳಿ ಬೋನು ಇಟ್ಟಿದ್ದರು. ರಾತ್ರಿ ಆಹಾರ ಅರಸಿಕೊಂಡು ಗ್ರಾಮಕ್ಕೆ ಬಂದ ಚಿರತೆ ಸೆರೆ ಸಿಕ್ಕಿದೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಸ್.ಆರ್.ಕೃಷ್ಣಪ್ಪ, ಉಪವಲಯಾಧಿಕಾರಿ ಮೇಟಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಚಿರತೆಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.