ಅಗರ್ತಲಾ, ಮಾ.6-ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ಜಯ ಸಾಧಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ತ್ರಿಪುರ ರಾಜ್ಯದ ವಿವಿಧೆಡೆ ಕೇಸರಿ ಪಕ್ಷ ಮತ್ತು ಎಡಪಂಥೀಯ ಬೆಂಬಲಿಗರ ನಡುವೆ ಘರ್ಷಣೆ ಮತ್ತು ಹಿಂಸಾಚಾರಗಳು ಭುಗಿಲೆದ್ದಿವೆ. ಈ ಘಟನೆಯಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕೆಲವರನ್ನು ಬಂಧಿಸಲಾಗಿದೆ.
ರಾಜಧಾನಿ ಅಗರ್ತಲಾದಲ್ಲಿ ಬಿಜೆಪಿ ಬೆಂಬಲಿಗರೆನ್ನಲಾದ ಗುಂಪೆÇಂದು ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಿ ಪೀಠೋಪಕರಣಗಳು ಮತ್ತಿತರ ವಸ್ತುಗಳನ್ನು ಧ್ವಂಸಗೊಳಿಸಿದ್ದರೆ, ಬೊಲೊನಿಯಾ ನಗರದ ಮಧ್ಯಭಾಗದಲ್ಲಿದ್ದ ರಷ್ಯಾ ನಾಯಕ, ಕಮ್ಯೂನಿಸ್ಟ್ ಕಾಂತ್ರಿಕಾರಿ ಮುಖಂಡ ಲೆನಿನ್ ಪ್ರತಿಮೆಯನ್ನು ನೆಲಸಮಗೊಳಿಸಿದ್ದಾರೆ.
ಪ್ರತಿಮೆಯನ್ನು ಕೆಡವಿದ ಗುಂಪು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಮೊಳಗಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪಶ್ಚಿಮ ತ್ರಿಪುರದ ಸಿಧೈ ಎಂಬಲ್ಲಿಯೂ ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಕಡಂತಲಾದಲ್ಲಿ ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಕೆಲವರು ಗಾಯಗೊಂಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಸುಮಾರು 250 ಮಂದಿ ಗಾಯಗೊಂಡಿದ್ದಾರೆ. ರಬ್ಬರ್ ತೋಟಗಳು ಮತ್ತು ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿಜ್ನಧರ್ ಆರೋಪಿಸಿದ್ದಾರೆ.
ಸಿಪಿಎಂ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ತಮ್ಮ 50ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ದೂರಿದೆ.
ಈ ಮಧ್ಯೆ ತ್ರಿಪುರ ರಾಜ್ಯಪಾಲ ತಥಾಗತ ರಾಯ್ ಮತ್ತು ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಎ.ಕೆ.ಶುಕ್ಲಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಹೊಸ ಸರ್ಕಾರ ರಚನೆಯಾಗುವ ತನಕ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡುವಂತೆ ತಿಳಿಸಿದ್ದಾರೆ.