ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ
ಬೆಂಗಳೂರು, ಮಾ.6- ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಬಾರದೆಂಬ ಹಿನ್ನೆಲೆಯಲ್ಲಿ ಸರ್ಕಾರ ಕಾನೂನು ತಜ್ಞರ ಸಲಹೆ ಪಡೆದು ಸಮಾಲೋಚನೆ ನಡೆಸುತ್ತಿದೆ.
ಸುಪ್ರೀಂಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ ಆಗಿರುವ ನಷ್ಟವೇನು? ತೀರ್ಪಿನಲ್ಲಿರುವ ಮಾರಕ ಹಾಗೂ ಪೂರಕವಾದ ಅಂಶಗಳೇನು ಎಂಬ ಬಗ್ಗೆ ಸಮಾಲೋಚನೆ ನಡೆಸಿದೆ.
ಕಾವೇರಿ ಅಂತಿಮ ತೀರ್ಪಿನ ಕುರಿತಂತೆ ರಾಜ್ಯ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 8ರಂದು ಸರ್ವಪಕ್ಷ ಸಭೆ ಕರೆದಿದ್ದು, ಇದರಲ್ಲಿ ವಿಧಾನ ಮಂಡಲದ ಉಭಯ ಸದನಗಳ ಮುಖಂಡರು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದು, ಮಹತ್ವದ ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡ ನಂತರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಾಗ ಸಭೆಯಲ್ಲಿ ಕೈಗೊಂಡ ಸಲಹೆಗಳನ್ನು ನೀಡಲು ತೀರ್ಮಾನಿಸಿದೆ.