2016ರ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ: ಸಭಾಧ್ಯಕ್ಷರಿಗೆ ಜೆಡಿಎಸ್ ಪತ್ರ

2016ರ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ: ಸಭಾಧ್ಯಕ್ಷರಿಗೆ ಜೆಡಿಎಸ್ ಪತ್ರ

ಬೆಂಗಳೂರು ಮಾ.6-2016ರ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಮತದಾನ ಮಾಡಿರುವ ಪ್ರಕರಣ ಬಾಕಿ ಉಳಿದಿದ್ದು, ಮುಂದಿನ ರಾಜಕೀಯ ಚಟುವಟಿಕೆಗಳು ಈ ಪ್ರಕರಣ ಇತ್ಯರ್ಥದ ಮೇಲೆ ಅವಲಂಬಿತವಾಗಲಿದೆ ಎಂದರೆ ತಪ್ಪಾಗಲಾರದು.
ರಾಜ್ಯಸಭೆಗೆ 2016ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಶಾಸಕರು ಮತ ಚಲಾಯಿಸಿದ್ದರು. ಇದರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ವಹಿಸುವಂತೆ ಜೆಡಿಎಸ್ ವಿಧಾನಸಭಾಧ್ಯಕ್ಷರು ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಇದೀಗ ಮತ್ತೆ ರಾಜ್ಯಸಭಾ ಚುನಾವಣೆ ಸಮೀಪಿಸಿದ್ದು, ಇದುವರೆಗೂ ಈ ಪ್ರಕರಣ ಇತ್ಯರ್ಥವಾಗಿಲ್ಲ. ವಿಚಾರಣೆ ಹಂತದಲ್ಲೇ ಉಳಿದಿರುವುದರಿಂದ ತೀರ್ಪು ಯಾರ ಪರವಾಗಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ.
ಇದೇ 23ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಅಷ್ಟರಲ್ಲಿ ಪ್ರಕರಣದ ಇತ್ಯರ್ಥವಾಗಿ ದೂರುದಾರರ ಪರವಾಗಿ ತೀರ್ಪು ಬಂದರೆ ಕುದುರೆ ವ್ಯಾಪಾರಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇರುತ್ತದೆ. ದೂರುದಾರರ ವಿರುದ್ಧವೇನಾದರೂ ಪ್ರಕರಣ ಇತ್ಯರ್ಥವಾದರೆ ಕುದುರೆ ವ್ಯಾಪಾರ ಗರಿಗೆದರಿ ಮತ್ತೆ ಅಡ್ಡಮತದಾನದ ಅವ್ಯವಸ್ಥೆ ತಲೆದೋರಲಿದೆ.
ಮುಂದಿನ ರಾಜಕೀಯ ಚಟುವಟಿಕೆಗಳು ಈ ಪ್ರಕರಣ ಇತ್ಯರ್ಥದ ಮೇಲೆ ಅವಲಂಬಿತವಾಗಿದೆ. ಈ ನಡುವೆ ಜೆಡಿಯು ವಿಪ್ ಉಲ್ಲಂಘಿಸಿ ಮತ ಚಲಾಯಿಸಿದವರ ಪರವಾಗಿ ಪ್ರಕರಣ ಇತ್ಯರ್ಥವಾದರೆ ಆ ಶಾಸಕರು ಯಾವ ಪಕ್ಷದವರೆಂದು ಪರಿಗಣಿಸಬೇಕು ಎಂಬ ಪ್ರಶ್ನೆಯೊಂದಿಗೆ ಸಭಾಧ್ಯಕ್ಷರಿಗೆ ಪತ್ರ ಬರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ