ತುಮಕೂರು, ಮಾ.6- ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಯುದ್ಧಕ್ಕೆ ಸಿಪಾಯಿಗಳು ಸಿದ್ದರಾಗುವಂತೆ ನಮ್ಮ ಕಾರ್ಯಕರ್ತರು ಸಿದ್ದರಾಗಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕರೆ ನೀಡಿದರು.
ಪಕ್ಷ ಕಚೇರಿಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬ್ಲಾಕ್ಗಳ ಅಧ್ಯಕ್ಷರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. 11 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಕೊರಟಗೆರೆಯಿಂದ ಡಾ.ಜಿ.ಪರಮೇಶ್ವರ್ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದರು.
ಕುಣಿಗಲ್ ಕ್ಷೇತ್ರದ ಹೊಣೆಗಾರಿಕೆಯನ್ನು ಸಂಸದ ಡಿ.ಕೆ.ಸುರೇಶ್ಗೆ ವಹಿಸಲಾಗಿದೆ. ಮಧುಗಿರಿ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಿಗೆ ಯುವ ಮುಖಂಡರು, ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗುತ್ತದೆ ಎಂದು ತಿಳಿಸಿದರು.
ಏಳು ವರ್ಷ ಸತತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿರುವ ಡಾ.ಜಿ.ಪರಮೇಶ್ವರ್ ಸಾಧನೆಯನ್ನು ವೇಣುಗೋಪಾಲ್ ಬಣ್ಣಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಸೂರ್ಯ, ಚಂದ್ರ ಇರುವಷ್ಟೇ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಕೆ.ಎನ್.ರಾಜಣ್ಣ, ಮುಖಂಡರಾದ ಮುಖ್ಯಮಂತ್ರಿಚಂದ್ರು, ಶಾಸಕ ಡಾ.ರಫಿಕ್ ಅಹಮ್ಮದ್, ಪಕ್ಷದ ನೂತನ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ಮಾತನಾಡಿದರು.
ಈ ವೇಳೆ ಜಿಲ್ಲೆಯಾದ್ಯಂತ ಆಗಮಿಸಿದ್ದ ಮುಖಂಡರು, ಕಾರ್ಯಕರ್ತರು ಶೀಘ್ರವೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಂತೆಯೂ ಹಾಗೂ ಜಿಲ್ಲೆ, ತಾಲ್ಲೂಕು ಮತ್ತು ಬೂತ್ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸುವಂತೆ ವೇಣುಗೋಪಾಲ್ ಅವರನ್ನು ಒತ್ತಾಯಿಸಿದರು.