ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಕೆಗೆ ಮಾ.10ರ ವರೆಗೆ ವಿಸ್ತರಣೆ
ಬೆಂಗಳೂರು, ಮಾ.6- ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮಾ.10ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆಗೆ ಮಾ.5ನ್ನು ನಿಗದಿಪಡಿಸಲಾಗಿತ್ತು. ಆ ಅವಧಿವರೆಗೆ 224 ಕ್ಷೇತ್ರಗಳಿಂದ 1900 ಅರ್ಜಿಗಳು ಮಾತ್ರ ಬಂದಿದ್ದವು. ಆಕಾಂಕ್ಷಿಗಳಿಂದ ನಿರಾಸಕ್ತಿಯೇನೋ ಅನ್ನಿಸುವಂತಿದೆ. ಹೀಗಾಗಿ ಅವಧಿಯನ್ನು ಇನ್ನೂ ಐದು ದಿನಗಳ ಕಾಲ ಮುಂದುವರಿಸಲಾಗಿದೆ.
ಕಳೆದ ಬಾರಿ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಎಂ.ಕೃಷ್ಣಪ್ಪ, ಪ್ರಿಯಕೃಷ್ಣ ಕುಟುಂಬದಿಂದ ಅರ್ಜಿ ಸಲ್ಲಿಕೆಯಾಗಿ ಟಿಕೆಟ್ ಪಡೆಯಲಾಗಿತ್ತು. ಈ ಬಾರಿ ನಾಲ್ಕು ಕುಟುಂಬಗಳಿಂದ ಅರ್ಜಿ ಪಡೆಯಲಾಗಿದೆ.
ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ, ಮಹದೇವಪ್ಪ ಪುತ್ರ ಸುನಿಲ್ ಬೋಸ್, ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರು ಅರ್ಜಿ ಪಡೆದಿದ್ದಾರೆ. ಇನ್ನೂ ಐದು ದಿನಗಳ ಕಾಲ ಗಡುವನ್ನು ವಿಸ್ತರಿಸಲಾಗಿತ್ತು. ಟಿಕೆಟ್ ಪಡೆಯುವವರು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಾಮಾನ್ಯರಿಗೆ 20 ಸಾವಿರ, ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 15 ಸಾವಿರ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿದ್ದರೆ 25 ಸಾವಿರ, ಹಾಲಿ ಶಾಸಕರು 50 ಸಾವಿರ, ಸಚಿವರಿಗೆ 1 ಲಕ್ಷ ನಿಗದಿ ಮಾಡಲಾಗಿದೆ.