ಗೂಂಡಾಗಿರಿ, ಮಾಫಿಯಾದಲ್ಲಿ ರಾಜ್ಯ ಸರ್ಕಾರ ನಂ.1: ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್
ಬೆಂಗಳೂರು, ಮಾ.6- ನಂ.1 ಎಂದು ಎಲ್ಲಾ ಕಡೆ ಫಲಕಗಳನ್ನು ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದರಲ್ಲಿ ನಂ.1 ಹತ್ಯೆಗಳಲ್ಲಾ, ಗೂಂಡಾ ವರ್ತನೆಯಲ್ಲಾ, ಮಾಫಿಯಾಗಳಲ್ಲಾ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಹರಿಹಾಯ್ದಿದ್ದಾರೆ.
ಚಾಮರಾಜಪೇಟೆಯಲ್ಲಿ ಬಿಜೆಪಿವತಿಯಿಂದ ಏರ್ಪಡಿಸಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೂಂಡಾಗಿರಿ, ಮಾಫಿಯಾದಲ್ಲಿ ರಾಜ್ಯ ಸರ್ಕಾರ ನಂ.1 ಆಗಿದೆ. 24ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ. ಬೆಂಗಳೂರು ಕ್ರೈಂ ಸಿಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಮುಕ್ತಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಕದಿರೇಶ್ ಅವರ ಹತ್ಯೆ ಯಾವ ಕಾರಣಕ್ಕಾಯಿತು ಎಂಬುದು ಈವರೆಗೂ ಗೊತ್ತಾಗಿಲ್ಲ. ಹಿಂದೂಗಳ ಹತ್ಯೆಯಿಂದ ಕಾಂಗ್ರೆಸ್ ನಿರ್ನಾಮವಾಗುತ್ತದೆ. ಎಲ್ಲೆಲ್ಲಿ ಹಿಂದೂಗಳ ಹತ್ಯೆಯಾಗಿದೆಯೋ ಎಲ್ಲವನ್ನೂ ಬಿಜೆಪಿಗೆ ತಿಳಿಸಿ. ಅದಕ್ಕಾಗಿ ನಾವು ಹೆಲ್ಪಲೈನ್ ಪ್ರಾರಂಭಿಸಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಹೋದೆಡೆಯಲೆಲ್ಲಾ ಕಾಂಗ್ರೆಸ್ ಪಕ್ಷ ನಿರ್ನಾಮವಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ನಾಗಾಲ್ಯಾಂಡ್ ಎಲ್ಲಾ ಕಡೆ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಈಗ ಕರ್ನಾಟಕದಲ್ಲೂ ಕೂಡ ತಳಕಚ್ಚಲಿದೆ ಎಂದು ಹೇಳಿದರು.
ಮಾಜಿ ಗೃಹ ಸಚಿವ ಆರ್.ಅಶೋಕ್ ಮಾತನಾಡಿ, ಚಾಮರಾಜಪೇಟೆಯಲ್ಲಿ ಬಿಜೆಪಿ ಎರಡು ಬಾರಿ ಗೆದ್ದಿದೆ. ಕಾಂಗ್ರೆಸ್, ಜೆಡಿಎಸ್, ಎಸ್ಡಿಪಿಐ ಪಕ್ಷಗಳು ಒಂದೇ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವು ಸುಲಭವಾಗುತ್ತೆ. ಇಲ್ಲಿಂದ ಉಪೇಂದ್ರ ಅವರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಉಪೇಂದ್ರ ನಮ್ಮ ಪಕ್ಷಕ್ಕೆ ಸೇರಿದರೆ ಸ್ವಾಗತಿಸುತ್ತೇವೆ ಎಂದು ಹೇಳಿದರು.
ಕಳೆದ ಮೂರು ದಿನಗಳ ಹಿಂದೆಯೇ ಅನುಮತಿ ಪಡೆದು ಪಾದಯಾತ್ರೆ ನಡೆಸುತ್ತಿದ್ದೇವೆ. ಆದರೆ, ಕಾಂಗ್ರೆಸ್ ಗೂಂಡಾಗಳು ಏಕಾಏಕಿ ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೆ, ಇವರನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹೇಳಿದರು.
ತ್ರಿಪುರಾದಲ್ಲಿ 9 ಹಿಂದೂಗಳ ಕೊಲೆಯಾಗಿದ್ದಕ್ಕೆ ಅಲ್ಲಿನ ಸರ್ಕಾರ ಬಿದ್ದು ಹೋಗಿ ಬಿಜೆಪಿ ಅಧಿಕಾರಕ್ಕೆ ಬಂದಿತು. ರಾಜ್ಯದಲ್ಲಿ 24 ಹಿಂದೂಗಳ ಕೊಲೆಯಾಗಿದೆ. ಇಲ್ಲಿನ ಸರ್ಕಾರವೂ ಬಿದ್ದು ಹೋಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಟ್ಲರ್ನಂತೆ ವರ್ತಿಸುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಆದರೆ, ಗೂಂಡಾಗಳನ್ನು ಕಳುಹಿಸಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಪೆÇಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಂತಿಯುತ ಪ್ರತಿಭಟನೆಗೆ ಕಾಂಗ್ರೆಸ್ನವರು ಅಡ್ಡಿಪಡಿಸಿ ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಬಿಜೆಪಿ ಮುಖಂಡ ದಿ.ಕದಿರೇಶ್ ಕಚೇರಿಯಲ್ಲಿ ಪೂಜೆ ಸಲ್ಲಿಸಿ ರಾಜ್ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ದಾರಿಯುದ್ಧಕ್ಕೂ ಕರಪತ್ರಗಳನ್ನು ಹಂಚಲಾಯಿತು.
ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಮುಖಂಡರಾದ ಮಾಳವಿಕ ಅವಿನಾಶ್, ನೆ.ಲ.ನರೇಂದ್ರ ಬಾಬು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಬಿಜೆಪಿಯವರ ಪಾದಯಾತ್ರೆ ಹಾಗೂ ಕಾಂಗ್ರೆಸ್ನವರು ಪ್ರತಿಭಟನೆಯಿಂದ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ಜಾಮ್ ಉಂಟಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿಯಾಯಿತು.
ಬಿಜೆಪಿ ಕೈಗೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ನಗರದ ಮೈಸೂರು ರಸ್ತೆಯಲ್ಲಿಂದು ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿ ಉಂಟಾಯಿತು.