ಬಿಸಿಲಿನ ಝಳ ಹೆಚ್ಚಳ: ಕಲ್ಲಂಗಡಿ ಹಣ್ಣುಗಳ ಮೊರೆಹೋದ ಗ್ರಾಹಕರು
ಬೆಂಗಳೂರು, ಮಾ.5- ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೇ ಇದ್ದು, ಈಗಾಗಲೇ ತಂಪು ಪಾನೀಯಗಳಿಗೆ ಗ್ರಾಹಕರು ಮೊರೆ ಹೋಗಿದ್ದು , ದಾಹ ನೀಗಿಸುವ ಕಲ್ಲಂಗಡಿ ವ್ಯಾಪಾರ ಬಲು ಜೋರಾಗಿದೆ.
ನಗರದ ಎತ್ತ ಕಣ್ಣಾಡಿಸಿದರೂ ಕಲ್ಲಂಗಡಿ ಹಣ್ಣುಗಳದೇ ರಾಶಿ ಕಾಣಿಸುತ್ತದೆ. ಈ ಬಾರಿ ಮಾರುಕಟ್ಟೆಗೆ ಕಲ್ಲಂಗಡಿ ಹಣ್ಣುಗಳು ಹೆಚ್ಚಾಗಿ ಬಂದಿದ್ದು , ಬೆಲೆ ಕೂಡ ಕಡಿಮೆ ಇದೆ. ಕೆಜಿಗೆ 15ರಿಂದ 20 ರೂ.ಗೆ ಮಾರಾಟವಾಗುತ್ತಿದೆ.
ಹಲವು ಔಷಧೀಯ ಗುಣಗಳನ್ನು ಹೊಂದಿರುವ ಕಲ್ಲಂಗಡಿ ಹಣ್ಣನ್ನು ಗ್ರಾಹಕರು ಹೆಚ್ಚಾಗಿಯೇ ಖರೀದಿಸುತ್ತಿದ್ದಾರೆ. ಅಲ್ಲದೆ ನೀರಿನಂಶ ಹೆಚ್ಚಾಗಿರುವುದರಿಂದ ದಾಹವನ್ನು ನೀಗಿಸುವ ಹಣ್ಣು ಎಂದರೆ ತಪ್ಪಾಗಲಾರದು.
ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲೋಡ್ಗಟ್ಟಲೆ ಕಲ್ಲಂಗಡಿ ಹಣ್ಣುಗಳು ನಗರಕ್ಕೆ ಆಮದಾಗಿದ್ದು , ಕಳೆದ ಬಾರಿಗಿಂತ ಈ ಬಾರಿ ವ್ಯಾಪಾರ ಉತ್ತಮವಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಎರಡು ತಳಿಯ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರಕುತ್ತಿದ್ದು , ಸಣ್ಣ ಗಾತ್ರ ಹಾಗೂ ಹಸಿರು ಬಣ್ಣ ಹೊಂದಿರುವ ಹಣ್ಣುಗಳಲ್ಲಿ ರುಚಿ ಹೆಚ್ಚಾಗಿದೆ. ಇನ್ನು ದೊಡ್ಡ ದೊಡ್ಡ ಗಾತ್ರದ ಹಣ್ಣುಗಳಲ್ಲೂ ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು , ಎರಡು ಹಣ್ಣುಗಳ ಬೆಲೆಯೂ ಸಹ ಒಂದೇ ರೀತಿಯಲ್ಲಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಲ್ಲಂಗಡಿ ರಾಮ ಬಾಣ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಈ ಬಾರಿಯ ಕಲ್ಲಂಗಡಿ ವ್ಯಾಪಾರ ಬಿರುಸಾಗಿಯೇ ನಡೆದಿದೆ.