ಕೆಆರ್ಪುರ, ಮಾ.5-ಬೆಂಗಳೂರನ್ನು ಮಾರಿರುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲದೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ, ಕೆಆರ್ಪುರ ವೃತ್ತದಲ್ಲಿ ಕೆಂಪೇಗೌಡ ಪುತ್ಥಳಿ ಅನಾವರಣ ಸೇರಿದಂತೆ ನಾನೂರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ಜೈಲಿಗೆ ಹೋಗಿ ಬಂದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಮಿಡ್ನೈಟ್ ಟೆಂಡರ್ ಮಾಡುತ್ತಾರೆ, ದಾಖಲೆಗಳು ಸುಟ್ಟು ಹಾಕುತ್ತಾರೆ, ಬೆಂಗಳೂರಿನ ಪ್ರಮುಖ ಕಟ್ಟಡಗಳನ್ನು ಅಡವಿಡುತ್ತಾರೆ. ಇವರು ಅಡವಿಟ್ಟ ಕಟ್ಟಡಗಳನ್ನು ಬಿಡಿಸುವುದೇ ನಮ್ಮ ಕೆಲಸವಾಗಿದೆ ಎಂದು ಹೇಳಿದರು.
ಜಾತಿ ಹೆಸರು ಹೇಳಿ ಮತ ಕೇಳುತ್ತಾರೆ, ಕೆಂಪೇಗೌಡ ಜಯಂತಿ ಆಚರಣೆ ಮಾಡಲು ಇವರಿಂದ ಘೋಷಿಸಲು ಆಗಲಿಲ್ಲ, ಚುನಾವಣೆಗೂ ಮುನ್ನ ನೀಡಿದ 165 ಭರವಸೆಗಳಲ್ಲಿ ಈಗಾಗಲೇ 155 ಭರವಸೆ ಈಡೇರಿಸಿದ್ದೇವೆ, ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದು. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನೂರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ, ಕಳೆದ ಐದು ವರ್ಷಗಳಲ್ಲಿ ಆದ ಅಭಿವೃದ್ಧಿ ಹಿಂದೆಂದಿಗೂ ಆಗಿರಲಿಲ್ಲ, ಕೆಆರ್ಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸ ಮಾಡುವವರೆಗೂ ನನ್ನ ಬೆನ್ನ ಹಿಂದೆಯೇ ಬೈರತಿ ಬಸವರಾಜ ಇರುತ್ತಿದ್ದರು ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಕ್ರೈಂ ಜಾಸ್ತಿ ಆಗಿದೆ ಅಂತಾರೆ, ಒಂದು ಬಾರಿ ರೆಕಾರ್ಡ್ ನೋಡಲಿ ಅವರಿಗೇ ಅರ್ಥವಾಗುತ್ತದೆ ಯಾವ ಸರ್ಕಾರವಿದ್ದಾಗ ಕ್ರೈಂ ಜಾಸ್ತಿ ಆಗಿತ್ತು ಎಂದು, ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರುವುದರಿಂದಲೇ ಬಂಡವಾಳ ಹೂಡಲು ವಿದೇಶದಿಂದ ಬರುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಜನ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ, ಕನಾಟಕದಲ್ಲಿ ಯಾವ ಮೋದಿಯ ಅಲೆಯೂ ನಡೆಯುವುದಿಲ್ಲ ಎಂದು ಹೇಳಿದರು. ಬಿಬಿಎಂಪಿ ಚುನಾವಣೆಯಲ್ಲಿ ಬಸವನಪುರ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿದ್ದ ಸುಂದರ್ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಸಚಿವರಾದ ಮಹದೇವಪ್ರಸಾದ್, ಕೆ.ಜೆ.ಜಾರ್ಜ್, ಮೇಯರ್ ಸಂಪತ್, ಶಾಸಕ ಬೈರತಿ ಬಸವರಾಜ, ಎಂಎಲ್ಸಿ ನಾರಾಯಣಸ್ವಾಮಿ, ಪಾಲಿಕೆ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್, ಎಸ್.ಜಿ.ನಾಗರಾಜ್, ಸೂರಿ, ರಾಧಮ್ಮ ವೆಂಕಟೇಶ್, ಮಂಜುನಾಥ್, ಅಂತೋಣಿಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಮುನೇಗೌಡ, ಮನೋಜ್, ಶಿವಪ್ಪ, ಪಟಾಕಿ ರವಿ ಮತ್ತಿತರರಿದ್ದರು.