447 ಕಂಪನಿಗಳಿಂದ ನೌಕರರಿಂದ ವೇತನ ಕಡಿತಗೊಳಿಸಿ ತೆರಿಗೆ ಇಲಾಖೆಗೆ 3,200 ಕೋಟಿ ರೂ.ವಂಚನೆ

ಮುಂಬೈ:ಮಾ-5:  447 ಕಂಪನಿಗಳು ತಮ್ಮ ನೌಕರರ ವೇತನದಲ್ಲಿ ಕಡಿತಮಾಡಿ ಆದಾಯ ತೆರಿಗೆ ಇಲಾಖೆಗೆ ಪಾವತಿ ಮಾಡದೇ 3,200 ಕೋಟಿ ರೂ.ಗಳನ್ನು ವಂಚಿಸಿರುವ ಹಗರಣವನ್ನು ತೆರಿಗೆ ಇಲಾಖೆ ಪತ್ತೆ ಮಾಡಿದೆ.

ಉದ್ಯೋಗಿಗಳ ವೇತನದ ಮೇಲಿನ ತೆರಿಗೆ ಹಣವನ್ನು ಕಡಿತ ಮಾಡಿಕೊಂಡ ಸಂಸ್ಥೆಗಳು ಅದನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿ ಮಾಡದೇ ವಂಚನೆ ಮಾಡಿರುವುದು ಬಯಲಾಗಿದೆ. ಐಟಿ ಇಲಾಖೆಯ ಟಿಡಿಎಸ್‌ ವಿಭಾಗ ಈ ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿದ್ದು, ಕೆಲವು ಪ್ರಕರಣಗಳಲ್ಲಿ ವಾರಂಟ್‌ ಕೂಡ ಜಾರಿ ಮಾಡಿದೆ. ಆದಾಯ ತೆರಿಗೆ ಕಾಯ್ದೆಯಡಿ ದಂಡ ಸಹಿತ ಕನಿಷ್ಠ 3 ತಿಂಗಳಿನಿಂದ 7 ವರ್ಷಗಳ ವರೆಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿದೆ. ಸೆಕ್ಷನ್‌ 276 ಬಿ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದೆ.

ಇದರ ಜತೆಗೆ ಈ ಕಂಪನಿಗಳ ವಿರುದ್ಧ ವಂಚನೆ ಹಾಗೂ ವಿಶ್ವಾಸದ್ರೋಹದ ಪ್ರಕರಣಗಳನ್ನೂ ದಾಖಲಿಸಲು ಐಟಿ ಇಲಾಖೆ ಚಿಂತಿಸುತ್ತಿದೆ. ತಪ್ಪಿತಸ್ಥರಲ್ಲಿ ಗಣ್ಯ ರಾಜಕೀಯ ಮುಖಂಡರೊಬ್ಬರ ಜತೆಗೆ ಸಂಪರ್ಕವಿರುವ ಬಿಲ್ಡರ್‌ಗಳೂ ಇದ್ದಾರೆ. ಒಬ್ಬ ಬಿಲ್ಡರ್ ತನ್ನ ನೌಕರರಿಂದ ಟಿಡಿಎಸ್‌ ನೆಪದಲ್ಲಿ 100 ಕೋಟಿ ರೂ.ಗಳನ್ನು ಸಂಗ್ರಹಿಸಿ ಉದ್ಯಮದ ವ್ಯವಹಾರಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಚಿತ್ರ ನಿರ್ಮಾಣ ಸಂಸ್ಥೆಗಳು, ಮೂಲಸೌಲಭ್ಯ ನಿರ್ಮಾಣ ಕಂಪನಿಗಳು, ಸ್ಟಾರ್ಟಪ್‌ಗಳು ಮತ್ತು ರಾತ್ರಿ ವಿಮಾನ ಹಾರಾಟ ಸಂಸ್ಥೆಗಳೂ ಈ ವಂಚಕರ ಗುಂಪಿನಲ್ಲಿ ಸೇರಿವೆ. ಬಂದರು ಅಭಿವೃದ್ಧಿಯ ಭಾಗವಾಗಿರುವ ಮೂಲಸೌಕರ್ಯ ಕಂಪನಿಯೊಂದು 14 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಐಟಿ ಸೊಲ್ಯೂಷನ್ಸ್‌ ಪೂರೈಸುವ ಬಹುರಾಷ್ಟ್ರೀಯ ಕಂಪನಿಯೊಂದು 11 ಕೋಟಿ ರೂ.ಗಳನ್ನು ವಂಚಿಸಿದೆ. ಇತ್ತೀಚೆಗೆ ನಡೆಸಿದ ಪರಿಶೀಲನೆಯ ವೇಳೆ 447 ಕಂಪನಿಗಳು ಒಟ್ಟು 3,200 ಕೋಟಿ ರೂ.ಗಳನ್ನು ತಮ್ಮ ನೌಕರರ ವೇತನದಿಂದ ಟಿಡಿಎಸ್‌ ರೂಪದಲ್ಲಿ ಕಡಿತ ಮಾಡಿಕೊಂಡಿವೆ; ಆದರೆ ತೆರಿಗೆ ಇಲಾಖೆಗೆ ಪಾವತಿಸಿಲ್ಲ ಎಂದು ಐಟಿ ಅಧಿಕಾರಿ ತಿಳಿಸಿದ್ದಾರೆ.

2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ ವರೆಗಿನ ಅವಧಿಯ ಲೆಕ್ಕಾಚಾರದಂತೆ ಈ ವಂಚನೆ ಪತ್ತೆಯಾಗಿದ್ದು, ಶೀಘ್ರವೇ ಕೆಲವು ವಂಚಕರನ್ನು ಬಂಧಿಸಲಿದ್ದೇವೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಇಲಾಖೆ ಈಗಾಗಲೇ ಕೆಲವು ಕಂಪನಿಗಳ ಬ್ಯಾಂಕ್ ಖಾತೆಗಳು ಮತ್ತು ಸ್ಥಿರಾಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಿಸಿದೆ. ಹಲವು ಪ್ರಕರಣಗಳಲ್ಲಿ ಟಿಡಿಎಸ್‌ ಹಣವನ್ನು ಮರುಬಂಡವಾಳವಾಗಿ ಹೂಡಲಾಗಿದೆ. ಕೆಲವರು ಈಗಾಗಲೇ ಕ್ಷಮೆಯಾಚಿಸಿದ್ದು, ತೆರಿಗೆ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಕೆಲವರು ಪ್ರತಿಕೂಲ ಮಾರುಕಟ್ಟೆ ಸ್ಥಿತಿಯಿಂದಾಗಿ ತೆರಿಗೆ ಪಾವತಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಂಗ್ರಹಿಸಲಾದ ಟಿಡಿಎಸ್‌ನಲ್ಲಿ ಶೇ 50ರಷ್ಟು ಮೊತ್ತವನ್ನು ಸರಕಾರಕ್ಕೆ ಪಾವತಿಸಿದ್ದು, ಉಳಿದ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

TDS scam, worth Rs 3,200 crore,Income Tax department

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ