ಬೆಂಗಳೂರು, ಮಾ.5-ಚಿತ್ರದುರ್ಗ ಜಿಲ್ಲೆಯ ಹಾಲುಮತ ಸಮಾಜದ ಪಿತಾಮಹಾ ಕುರಿಗಾಹಿಗಳ ಉನ್ನತಿಗೆ ಶ್ರಮಿಸಿದ್ದ ಹಿರಿಯೂರು ತಾಲ್ಲೂಕು ಹರ್ತಿಕೋಟೆ ಪಟೇಲ್ ಎಚ್.ಆರ್.ಶಿವರುದ್ರಪ್ಪ (96) ನಿಧನರಾಗಿದ್ದಾರೆ.
ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ರುದ್ರಣ್ಣ ಹರ್ತಿಕೋಟೆ ಅವರ ತಾತ ಶಿವರುದ್ರಪ್ಪ ಅವರು ಹಾಲುಮತ ಕುರುಬ ಸಮಾಜದ ಶ್ರೇಯೋಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸದ್ದಿಲ್ಲದೆ ತಮ್ಮ ಸೇವೆ ಸಲ್ಲಿಸಿದ್ದರು. ಸಮುದಾಯದ ಏಳ್ಗೆಗಾಗಿ ಅನೇಕ ಹೋರಾಟಗಳನ್ನು ಮಾಡುವ ಮೂಲಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿದ್ದರು.
ಹಿರಿಯೂರು ತಾಲ್ಲೂಕು ಕುರುಬರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಜಿಲ್ಲಾ ಕುರುಬ ಸಂಘದ ಉಪಾಧ್ಯಕ್ಷರಾಗಿ ಹಾಸ್ಟೆಲ್ ನಿರ್ಮಾಣದಲ್ಲಿ ಅಪಾರವಾಗಿ ಶ್ರಮಿಸಿದ್ದರು.
ಹರ್ತಿಕೋಟೆ ಉಣ್ಣೆ ಕೈಮಗ್ಗ ನೇಕಾರ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾಗ ರಾಜ್ಯ ಕಂಬಳಿ ನೇಕಾರಿಕೆಯಲ್ಲಿ ಎರಡನೇ ಸ್ಥಾನ ಪಡೆಯುವಂತೆ ಮಾಡಿ ರಾಜ್ಯ ಪ್ರಶಸ್ತಿಯ ಕೀರ್ತಿಗೆ ಭಾಜನರಾಗಿದ್ದರು.
ಅವರ ಸ್ವಗ್ರಾಮದಲ್ಲಿ ಅಪಾರ ಬಂಧುಗಳು, ಅಭಿಮಾನಿಗಳ ಅಶ್ರುತರ್ಪಣದೊಂದಿಗೆ ಅಂತಿಮ ಸಂಸ್ಕಾರ ನೆರವೇರಿತು.