ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಸಮಾವೇಶ
ಬೆಂಗಳೂರು,ಮಾ.5- ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟದ ವತಿಯಿಂದ ಇದೇ 8 ಮತ್ತು 9ರಂದು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಮಹಿಳಾ ಮುನ್ನಡೆಯ ಮುಖಂಡರಾದ ಮಲ್ಲಿಗೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳಲಿರುವ ಭಯವನ್ನು ದೂರ ಮಾಡಿ ಆತ್ಮವಿಶ್ವಾಸ ಮೂಡಿಸಿ ಅವರ ಜಾಗೃತಿ ಮೂಡಿಸಲು ಈ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಮ್ಮ ಸುತ್ತಮುತ್ತಲಿನಲ್ಲಿರುವ ಹೆಚ್ಚತ್ತಿರುವ ದೌರ್ಜನ್ಯಗಳು ಹೆಚ್ಚುತ್ತಿದ್ದು, ದೆಹಲಿಯ ನಿರ್ಭಯ ಘಟನೆ ಮಂಗಳೂರಿನಲ್ಲಿ ಹಾಡುಹಗಲೇ ನಡೆದ ದಬ್ಬಾಳಿಕೆಗಳು ಇವೆಲ್ಲ ಸೂಕ್ಷ್ಮ ಮನಸ್ಸಿನ ಮಹಿಳೆಯರ ಮೇಲೆ ಪ್ರಭಾವ ಉಂಟುಮಾಡಿದೆ. ಇನ್ನು ಮುಂದೆ ಈ ತರ ನೋವುಗಳನ್ನು ಸಹಿಸಿಕೊಂಡು ಇರಬಾರದು. ಹೆಣ್ಣು ಮಕ್ಕಳು ಇದನ್ನು ಎದುರಿಸಬೇಕು ಎಂದು ಸಲಹೆ ಮಾಡಿದರು.
ಈ ಹಿನ್ನೆಲೆಯಲ್ಲಿ ಇದೇ 8ರಂದು ಸಂವಿಧಾನ, ಸಮಾಜ ಮತ್ತು ಮಹಿಳೆ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು, ಪುಣೆಯ ಮನೀಷಿ ಗುಪ್ತೆ ಈ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಸಂಜೆ 5 ಗಂಟೆಗೆ ಸಮಾವೇಶಕ್ಕೆ ಆಗಮಿಸುವ ಎಲ್ಲ ಹೆಣ್ಣು ಮಕ್ಕಳು ಬಿಳಿ ಸಮವಸ್ತ್ರ ಧರಿಸಿ ಮೌನಜಾಗೃತಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
9ರಂದು ಶಿವಮೊಗ್ಗ ನೆಹರು ಮೈದಾನದಿಂದ ಬೃಹತ್ ಹಕ್ಕೋತ್ತಾಯ ಜಾಥಾ ನಡೆಯಲಿದೆ ಎಂದು ತಿಳಿಸಿದರು.