ನಾಡಪ್ರಭು ಕೆಂಪೇಗೌಡರಿಗೆ ಅಪಮಾನ: ಮೇಯರ್ ಸಂಪತ್ ರಾಜ್ ಕ್ಷಮೆ
ಬೆಂಗಳೂರು, ಮಾ.5- ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡ ಅವರಿಗೆ ಅಪಮಾನವಾಗಿರುವುದಕ್ಕೆ ಮೇಯರ್ ಸಂಪತ್ ರಾಜ್ ಅವರು ಪಾಲಿಕೆ ಸಭೆಯಲ್ಲಿಂದು ಕ್ಷಮೆ ಯಾಚಿಸಿದರು.
ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಕ್ಷಮಾಪಣೆ ಕೋರಿದರು. ಕಳೆದ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಕೆಂಪೇಗೌಡರ ಭಾವಚಿತ್ರ ಅಪಮಾನ ಖಂಡಿಸಿ ಸಭಾತ್ಯಾಗ ಮಾಡಿದರು.
ಸಣ್ಣ ಪುಟ್ಟ ದೋಷಗಳಿಂದ ಭಾವಚಿತ್ರ ತಪ್ಪಾಗಿ ಮುದ್ರಿತವಾಗಿದೆ. ನಮ್ಮಿಂದ ತಪ್ಪಾಗಿದೆ. ಆದ್ದರಿಂದ ಮನಃಪೂರ್ವಕವಾಗಿ ಕ್ಷಮೆ ಕೋರುತ್ತಿದ್ದೇನೆ ಎಂದು ತಿಳಿಸಿದ ಅವರು, ಬೇರೆ ಪುಸ್ತಕಗಳನ್ನು ಮುದ್ರಿಸಿ ಹಂಚುವುದಾಗಿ ತಿಳಿಸಿದರು.
ಆಡಳಿತ ಪಕ್ಷದ ನಾಯಕ ಶಿವರಾಜ್ ಮಾತನಾಡಿ, ಕೆಲ ಸಣ್ಣ ಪುಟ್ಟ ದೋಷಗಳಿಂದ ಪ್ರಮಾದವಾಗಿದೆ. ನಮಗೂ ನಾಡಪ್ರಭು ಕೆಂಪೇಗೌಡರ ಬಗ್ಗೆ ಅಪಾರ ಗೌರವವಿದೆ. ಕೆಂಗಲ್ ಹನುಮಂತಯ್ಯನವರ ಕಾಲದಿಂದಲೂ ಕೆಂಪೇಗೌಡರ ಅಧ್ಯಯನ ಪೀಠಕ್ಕೆ ಯಾವುದೇ ಸರ್ಕಾರ ಹಣ ಮೀಸಲಿಟ್ಟಿರಲಿಲ್ಲ. ಆದರೆ ನಮ್ಮ ಸರ್ಕಾರ 50 ಕೋಟಿ ರೂ. ಹಣವನ್ನು ಕೆಂಪೇಗೌಡ ಅಧ್ಯಯನ ಪೀಠಕ್ಕೆ ಮೀಸಲಿಟ್ಟಿದೆ ಎಂದರು.
ಮಾಜಿ ಮೇಯರ್ ಮಂಜುನಾಥ ರೆಡ್ಡಿ ಮಾತನಾಡಿ, ನಮ್ಮ ತಪ್ಪಿಗೆ ನಾವು ಕ್ಷಮೆ ಕೇಳಿದ್ದೇವೆ. ಬೆಂಗಳೂರು ರಕ್ಷಿಸಿ ಪಾದಯಾತ್ರೆ ವೆಬ್ಸೈಟ್ನಲ್ಲಿ ಬೇರೆ ರಾಜ್ಯಗಳ ರಸ್ತೆ ಹಾಗೂ ಕಸದ ಫೆÇೀಟೋಗಳನ್ನು ಹಾಕಿದ್ದೀರಲ್ಲ. ಈಗ ನೀವು ಕ್ಷಮೆ ಕೇಳಬೇಕು ಎಂದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದವೇ ನಡೆಯಿತು.
ಒಂದು ವೇಳೆ ಕ್ಷಮೆ ಕೇಳದಿದ್ದರೆ ಹಲಸೂರು ಠಾಣೆಯಲ್ಲಿ ದೂರು ನೀಡುವುದಾಗಿ ತಿಳಿಸಿದರು.