ಬೆಂಗಳೂರು, ಮಾ.5- ಹೊಸದಾಗಿ ಆಯ್ಕೆಯಾಗಿರುವ 875 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ 809 ಗ್ರಾಪಂ ಕಾರ್ಯದರ್ಶಿ ಗ್ರೇಡ್ -1 ಅಧಿಕಾರಿಗಳೂ ಸೇರಿದಂತೆ ಒಟ್ಟು 1624 ಮಂದಿಗೆ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿಧಾನಸೌಧ ಹಾಗೂ ವಿಕಾಸಸೌಧದ ನಡುವಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ನೂತನವಾಗಿ ಆಯ್ಕೆಯಾಗಿರುವ ಅಧಿಕಾರಿಗಳಿಗೆ ನಾನು ನಮ್ಮ ಗ್ರಾಮಗಳನ್ನು ಸ್ವಾವಲಂಬಿ, ಸ್ವಾಭಿಮಾನಿ, ಸಾತ್ವಿಕ, ನೆಮ್ಮದಿಯ, ಶಾಂತಿ ಸಮೃದ್ಧಿಯ ಗ್ರಾಮಗಳನ್ನಾಗಿ ಮಾಡಲು ಜನರ ಭಾವನೆ, ಬೇಡಿಕೆ, ಅನಿಸಿಕೆಗಳಿಗೆ ಸ್ಪಂದಿಸುವೆ. ನಮ್ಮ ಗ್ರಾಮಗಳನ್ನು ವ್ಯಾಜ್ಯ ಮುಕ್ತ, ತ್ಯಾಜ್ಯಮುಕ್ತ, ಶೋಷಣೆ ಮುಕ್ತ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ, ಆರೋಗ್ಯವಂತ ಸಮಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸುವೆ.
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಸ್ವರಾಜ್ಯದ ಕನಸನ್ನು ನನಸಾಗಿಸಲು ಕರ್ನಾಟಕ ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ-2015ರ ಸದಾಶಯಗಳನ್ನು ಸಾಕಾರಗೊಳಿಸಲು ಶ್ರದ್ಧೆಯಿಂದ, ನಿಷ್ಠೆಯಿಂದ ಶುದ್ಧ ಅಂತಃಕರಣದಿಂದ ಸಮರ್ಪಣಾಭಾವದಿಂದ ಕೆಲಸ ಮಾಡಲು ಸಂಪೂರ್ಣವಾಗಿ ತೊಡಗಿಸಿಕೊಂಡು ಗ್ರಾಮೀಣ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತಂದು ಹಳ್ಳಿಗರನ್ನು ಹಂಗಿನ ಬದುಕಿನಿಂದ ಹಕ್ಕಿನ ಬದುಕಿನತ್ತ ದಾಪುಗಾಲನ್ನಿಡಲು ಸಾಮಥ್ರ್ಯ ಮೀರಿ ಪ್ರಯತ್ನಿಸುವುದಾಗಿ ಸತ್ಯ ನಿಷ್ಠೆ/ ದೇವರ ಹೆಸರಿನಲ್ಲಿ ಪ್ರತಿಜ್ಞೆಗಯ್ಯುತ್ತೇನೆ ಎಂಬ ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ಮಾತನಾಡಿದ ಅವರು, ಹೊಸದಾಗಿ ನೇಮಕವಾಗಿರುವ ನೀವು ಕಾನೂನಿನ ಸದಾಶಯದಂತೆ ಈಡೇರಿಸಬೇಕು. ಮಾನವೀಯತೆಯಿಂದ ಸೇವೆ ಮಾಡಬೇಕು ಎಂದು ಕರೆ ನೀಡಿದರು.
ಬಡ ವ್ಯಕ್ತಿ ಬಂದರೂ ತಾತ್ಸಾರ ತೋರದೆ ಸಮಸ್ಯೆ ಅರಿತು ನಿಮ್ಮ ಕುಟುಂಬದ ಹಿರಿಯರೊಬ್ಬರನ್ನು ಕಂಡರೆ ಯಾವ ರೀತಿಯಲ್ಲಿ ಸೌಲಭ್ಯ ಕಲ್ಪಿಸುತ್ತೀರೋ ಅದೇ ರೀತಿ ಅವರಿಗೂ ಸಮಸ್ಯೆ ನಿವಾರಿಸಲು ನೆರವಾಗಿ ಎಂದು ಸಲಹೆ ಮಾಡಿದರು.
ಗ್ರಾಮ ಸ್ವರಾಜ್ ಕನಸು ನನಸು ಮಾಡಲು ಹಳ್ಳಿಗಳು ಸದೃಢವಾಗಬೇಕಿದೆ. ಇದರಿಂದ ರಾಷ್ಟ್ರವೂ ಸದೃಢವಾಗಲಿದೆ. ಇದಕ್ಕೆ ಪೂರಕವಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕಿದೆ.
ಉತ್ತಮ ವಿದ್ಯಾಭ್ಯಾಸದೊಂದಿಗೆ ಈ ಹುದ್ದೆ ಅಲಂಕರಿಸಿರುವ ನಿಮ್ಮ ಭವಿಷ್ಯ ಉಜ್ವಲವಾಗಲಿ. ನಿಮ್ಮ ಸೇವೆ ತರುವಂತಾಗಲಿ. ಇನ್ನೂ ಉನ್ನತ ಹುದ್ದೆ ಸಿಗಲಿ ಎಂದು ಹಾರೈಸಿದರು.
ಇಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದವರ ಹುದ್ದೆಗಳಿಗೆ ಮಾ.3ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಬಿಡುಗಡೆಯಾಗಿತ್ತು. ಈಗಾಗಲೇ ಜಿಲ್ಲಾ ಪಂಚಾಯ್ತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾ.24ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಇದೀಗ ಆಯ್ಕೆಯಾಗಿರುವ ಈ ಅಭ್ಯರ್ಥಿಗಳಿಗೆ ಮೈಸೂರಿನ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಎರಡು ತಿಂಗಳ ತರಬೇತಿ ನೀಡಿ ಪಂಚಾಯ್ತಿಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು ಇಲಾಖೆಯಲ್ಲಿ 650 ಪಿಡಿಒ ಹುದ್ದೆಗಳು, 450 ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳಿಗೆ ಮುಂಬಡ್ತಿ ನೀಡಿ ನಿಯಮಾನುಸಾರ ನೇಮಕ ಮಾಡಲಾಗುವುದು. ನೇರ ನೇಮಕಾತಿಯಡಿ 385 ಪಿಡಿಒ, 291 ಗ್ರಾಪಂ ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳಿಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ 25ಜಿಲ್ಲೆಗಳು ಬಯಲು ಬಹಿರ್ದೆಶೆ ಮುಕ್ತವಾಗಲಿದೆ. ಕೇಂದ್ರ ಸರ್ಕಾರದ ಪ್ರಶಸ್ತಿಗಳು ಸಿಗುತ್ತಿವೆ. ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಇನ್ನು ಉತ್ತಮವಾಗಿ ಕೆಲಸ ನಿರ್ವಹಿಸುವ ಅಪೇಕ್ಷೆ ಹೊಂದಿದ್ದೇವೆ ಎಂದರು.
ಇಂದು ಪಕ್ಷಕ್ಕೆ ಅಶೋಕ್ ಖೇಣಿ ಅವರ ಸೇರ್ಪಡೆಯಿಂದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಅನುಕೂಲವಾಗಲಿದೆ. ನೈಸ್ ಸಂಸ್ಥೆ ವಿವಾದವೇ ಬೇರೆ, ರಾಜಕೀಯವೇ ಬೇರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಬೇಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನಕಾರ್ಯದರ್ಶಿ ನಾಗಲಾಂಬಿಕಾದೇವಿ, ಆಯುಕ್ತ ಪ್ರಕಾಶ್, ಶಾಸಕ ರಾಮಕೃಷ್ಣ ದೊಡ್ಡಮನಿ, ನಿರ್ದೇಶಕರಾದ ಹೂನಹಳ್ಳಿ ನಾಗರಾಜ್, ಕೆಂಪೇಗೌಡ, ಬೆಂಗಳೂರು ಗ್ರಾಮಾಂತರ ಜಿಪಂ ಸಿಇಒ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.