ಬೆಂಗಳೂರು,ಮಾ.5-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಒತ್ತಾಯಿಸಿ ಏ.14ರಂದು ಗೂಂಡಾ ರಾಜ್ಯ ಬೇಡ ಎಂಬ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಯುವ ನಾಯಕ ಅನಿಲ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ವಿಷಾಧವೆನಿಸಲಿದೆ. ಅನೇಕ ರಾಜಕಾರಣಿಗಳ ಮಕ್ಕಳು ಮತ್ತು ಬೆಂಬಲಿಗರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಾರಕಾಸ್ತ್ರಗಳನ್ನಿಡಿದು ಗೂಂಡಾಗಿರಿ ಮಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿದೆ. ಅನೇಕ ಶಾಸಕರು, ಪೊಲೀಸ್ ಅಧಿಕಾರಿಗಳನ್ನು ತಮ್ಮ ಕೈವಶ ಮಾಡಿಕೊಂಡು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರವನ್ನು ಮಾಫಿಯ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದರು.
ಇವರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿ ಅಧಿಕಾರದ ದರ್ಪವನ್ನು ತೋರಿಸುವ ಮೂಲಕ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇವರ ಗೂಂಡಾ ಪ್ರವೃತ್ತಿಗಳು ಹೆಚ್ಚಾಗುತ್ತಿದ್ದು ,ಕಾನೂನು ಸುವ್ಯವಸ್ಥೆಗೆ ಭಂಗವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾನೂನು ರೂಪಿಸುವ ಜವಾಬ್ದಾರಿ ಹೊಂದಿರುವ ಶಾಸಕರು ತಮ್ಮ ಕುಟುಂಬ ಹಾಗೂ ಹಿಂಬಾಲಕರು ಕಾನೂನು ಬಾಹಿರ ಚಟುವಟಿಕೆ ನಡೆಸಲು ಪ್ರೋ ನೀಡಿ ಸ್ವತಃ ಅವರೇ ರಕ್ಷಣೆಗೆ ನಿಂತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದು ತಮ್ಮ ಪಕ್ಷದಲ್ಲಿ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಒಂದು ವೇಳೆ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರ ವಿರುದ್ದ ನಾವು ಪ್ರಚಾರ ಮಾಡುವುದಾಗಿ ಹೇಳಿದರು.
ಈ ಆಂದೋಲನವನ್ನು ಬೆಂಬಲಿಸಿ ಸಾವಿರಕ್ಕೂ ಹೆಚ್ಚು ಜನರ ಸಹಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಟೌನ್ಹಾಲ್ನಿಂದ ಫ್ರೀಡಂಪಾರ್ಕ್ವರೆಗೂ ಐಕ್ಯತೆ ನಡಿಗೆ ಹಮ್ಮಿಕೊಳ್ಳಲಾಗಿದೆ. ಈ ನಡಿಗೆಯಿಂದ ಮತದಾರರಿಗೆ ಪ್ರಜ್ಞೆ ಮೂಡಿಸಲು ನಾನು ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗೆ ಮತ ಚಲಾಯಿಸುವುದಿಲ್ಲ ಎಂದು ಭಾರತದ ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡುತ್ತೇವೆ ಎಂದು ತಿಳಿಸಿದರು.
ಆಂದೋಲನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ: 9108915444 ಸಂಪರ್ಕಿಸಲು ಕೋರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಂದೋಲನದ ನಾಯಕರಾದ ಗಗನ್ ನಂದಿ, ರಘು ನಾರಾಯಣ್, ರಾಕೇಶ್ ಗೌಡ, ಶರತ್ಕುಮಾರ್ ಮತ್ತಿತರರು ಇದ್ದರು.