ಸಿಂಧಗಿ, ಮಾ.5- ಬಡತನದ ಬೇಗೆಯಲ್ಲಿ ಬಳಲುತ್ತಿದ್ದರು ಸಾಲ ಸೋಲ ಮಾಡಿ ಮದುವೆ ಮಾಡುವ ಸಂಧರ್ಭದಲ್ಲಿ ತಮ್ಮ ಮದುವೆಯ ಹಣವನ್ನು ಉಳಿಸಿ ಬಡ ಜನರ ಮದುವೆಗೆ ಖರ್ಚು ಮಾಡುತ್ತಿರುವ ಮಂಜುಳಾ ಗೋವರ್ಧನ್ ಅವರ ಕ್ರಮ ಆದರ್ಶಪ್ರಾಯ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಿಂದಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಡಾ ಮಂಜುಳಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಡಾ.ಮಂಜುಳಾ ಗೋವರ್ಧನಮೂರ್ತಿ ಅವರಿಗೆ ಆಡಂಬರದ ಮದುವೆ ಮಾಡಿಕೊಳ್ಳುವ ಎಲ್ಲಾ ಅನುಕೂಲತೆಯಿತ್ತು. ಆದರೆ, ಅತ್ಯಂತ ಸರಳ ಮತ್ತು ಅರ್ಥಪೂರ್ಣವಾಗಿ ಮದುವೆಯಾದ ಈ ಜೋಡಿಗಳು, ತಮ್ಮ ಮದುವೆಯ ಹಣವನ್ನು ಸಾಮೂಹಿಕ ಮದುವೆಗೆ ವಿನಿಯೋಗಿಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು.
ಸಾರಿಗೆ ಸಚಿವ ಎಂ ರೇವಣ್ಣ ಮಾತನಾಡಿ, ಸಿಂದಗಿ ತಾಲೂಕಿನ ಅಭಿವೃದ್ದಿಯ ಬಗ್ಗೆ ಮಂಜುಳಾ ಅವರು ಬಹಳಷ್ಟು ಕನಸುಗಳನ್ನು ಹೊಂದಿದ್ದಾರೆ. ಈ ಕನಸುಗಳನ್ನು ನನಸು ಮಾಡಲು ಡಾ.ಮಂಜುಳಾ ಫೌಂಢೇಶನ್ ಪ್ರಾರಂಭಿಸಿದ್ದು, ಈ ಫೌಂಡೇಶನ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ತಮ್ಮ ಮದುವೆಯ ಹಣ ಉಳಿಸಿ ಬೇರೆ ಜೋಡಿಗಳ ಬದುಕಿನಲ್ಲಿ ನಂದಾದೀಪವಾಗಿದ್ದಾರೆ. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ಸಿಂಧಗಿ ಮತ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ರಾಜಕೀಯ ಶಕ್ತಿಯಿಂದ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂಪಾಯಿಗಳ ಅನುದಾನ ಈ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ್ದಾರೆ. ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದ್ದು, ಇಲ್ಲಿನ ಜನರ ಆಶಯದಂತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಹೇಳಿದರು.
ಡಾ.ಮಂಜುಳಾ ಮಾತನಾಡಿ, ಮದುವೆ ಎಂಬುದು ಎಲ್ಲಾ ಜನರ ಬದುಕಿನ ಪ್ರಮುಖ ಘಟ್ಟ. ಈ ಘಟ್ಟವನ್ನು ಸರಿಯಾದ ರೀತಿಯಲ್ಲಿ ಹೊಂದಲು ಹಲವಾರು ಜನರಿಗೆ ಸಾಧ್ಯವಿಲ್ಲ. ಅದರಲ್ಲೂ ಪ್ರಮುಖವಾಗಿ ಆರ್ಥಿಕತೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದಂತಹ ಜನರ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಉದ್ದೇಶ ನಮ್ಮದಾಗಿದೆ. ನಾನು ಹಾಗೂ ನನ್ನ ಪತಿ ನಮ್ಮ ಮದುವೆಯ ಹಣವನ್ನು ಉಳಿಸಿ ಇಂದು ಮದುವೆಯಾಗುತ್ತಿರುವ 25 ಜೋಡಿಗಳ ಮದುವೆಯಲ್ಲಿ ಸಂತಸವನ್ನು ಕಾಣುತ್ತಿದ್ದೇವೆ ಎಂದರು.
ಅಲ್ಲದೆ, ಸಿಂಧಗಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಾನು ನಿಮ್ಮ ಮನೆಯ ಮಗಳಾಗಿ ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ. ಯುವಕರು ಅದ್ದೂರಿ ವಿವಾಹ ತಿರಸ್ಕರಿಸಿ ಸರಳ ಮದುವೆಯಾಗುವಂತೆ ಮನವಿ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕನಕ ಗುರುಪೀಠದ ಶ್ರೀ ಪಿಂತಣಿ ಬ್ರಿಜ್ ಸಿದ್ದರಾಮನಪುರಿ, ಅಬಕಾರಿ ಸಚಿವರಾದ ತಿಮ್ಮಾಪುರ, ರಾಜ್ಯದ ವಿವಿಧ ಭಾಗಗಳ ಶಾಸಕರು, ಸಂಸದರು, ಜಿಲ್ಲಾ, ತಾಲ್ಲೂಕು ಮುಖಂಡರು, ಜಿಪಂ, ತಾಪಂ, ಗ್ರಾಪಂ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. 101 ಜನ ಜೋಡಿಗಳು ಇದೇ ಸಂಧರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.