ಬಿಬಿಎಂಪಿ ಆಸ್ತಿಗಳನ್ನು ಅಡಮಾನವಿಟ್ಟಿರುವ ಬಗ್ಗೆ ಕಾಂಗ್ರೆಸ್ ಸುಳ್ಳು ಆರೋಪ: ಶ್ವೇತಪತ್ರ ಹೊರಡಿಸುವಂತೆ ಸಿಎಂಗೆ ಪತ್ರ
ಬೆಂಗಳೂರು, ಮಾ.5- ಬಿಬಿಎಂಪಿ ಆಸ್ತಿಗಳನ್ನು ಅಡಮಾನವಿಟ್ಟಿರುವ ಬಗ್ಗೆ ಕಾಂಗ್ರೆಸ್ನವರು ಸುಳ್ಳುಹೇಳಿಕೆ ನೀಡುತ್ತಿದ್ದೀರಾ… ಈ ಕುರಿತಂತೆ ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪಾಲಿಕೆ ಸಭೆಯಲ್ಲಿಂದು ತಿಳಿಸಿದರು.
ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು , ಇತ್ತೀಚೆಗೆ ಕಾಂಗ್ರೆಸ್ನವರು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪಾಲಿಕೆ ಆಸ್ತಿಯನ್ನು ಬಿಜೆಪಿಯವರು ಅಡಮಾನ ಇಟ್ಟಿದ್ದಾರೆ ಎಂದು ಹೇಳುತ್ತಿದ್ದೀರಾ. ಈ ರೀತಿಯ ಹೇಳಿಕೆ ವಿಷಾದನೀಯ. ಕಾಂಗ್ರೆಸ್ ಅವರ ಆಡಳಿತಾವಧಿಯಲ್ಲಿ ಅವರು ಮಾಡಿದ ಸಾಲವನ್ನು ತೀರಿಸಲು ಆಸ್ತಿಯನ್ನು ಅಡಮಾನ ಇಟ್ಟಿದ್ದೇವೆ. ಇದಕ್ಕೆ ಕಾಂಗ್ರೆಸ್ನವರೇ ಕಾರಣ ಎಂದು ತಿರುಗೇಟು ನೀಡಿದರು.
ಈ ಹೇಳಿಕೆಗೆ ಆಕ್ರೋಶಗೊಂಡ ಮೇಯರ್ ಸಂಪತ್ರಾಜ್, ಶಿವರಾಜ್, ಮಂಜುನಾಥ ರೆಡ್ಡಿ ಪ್ರತಿಕ್ರಿಯಿಸಿ ಸಾಲ ಮಾಡಬಾರದು ಅಂತಾ ಸಿಎಂ ಹೇಳಿಲ್ಲ.. ಆದರೆ ಸಾರ್ವಜನಿಕ ಆಸ್ತಿಯನ್ನು ಅಡಮಾನ ಇಡಬಾರದು ಅಂತಾ ಹೇಳಿದ್ದಾರೆ ಎಂದು ಗುಡುಗಿದರು.
ಇದಕ್ಕೆ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ ಯಾವ ಕಾರಣಕ್ಕಾಗಿ ಆಸ್ತಿಯನ್ನು ಅಡಮಾನ ಇಟ್ಟಿದ್ದೇವು. ನಮ್ಮ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎಷ್ಟು ಅನುದಾನ ಬಿಡುಗಡೆಯಾಗಿತ್ತು. ಕಾಂಗ್ರೆಸ್ನವರು ಎಷ್ಟು ಹಣ ಬಿಡುಗಡೆ ಮಾಡಿದ್ದೀರಾ. 198 ವಾರ್ಡ್ಗಳಿಗೆ ಎಷ್ಟೆಷ್ಟು ಹಣ ಹಂಚಿಕೆಯಾಗಿದೆ. 2015ರಿಂದ ಕಾಂಗ್ರೆಸ್ನವರು ಎಷ್ಟು ಹಣವನ್ನು ಬಿಡುಗಡೆ ಮಾಡಿರುವ ಬಗ್ಗೆ ನೀವು ಶ್ವೇತಪತ್ರ ಹೊರಡಿಸಿ ಆಗ ತಿಳಿಯುತ್ತದೆ. ಯಾರು ಸತ್ಯ ಹರಿಶ್ಚಂದ್ರರು ಎಂದು.
ಈ ಕುರಿತಂತೆ ಮುಖ್ಯಮಂತ್ರಿಯವರಿಗೆ ಬರೆದಿದ್ದ ಶ್ವೇತಪತ್ರವನ್ನು ಹಸ್ತಾಂತರಿಸಿದರು.