ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ಮಾ.7ರಂದು ಮುಖ್ಯಮಂತ್ರಿ ಚಾಲನೆ
ಬೆಂಗಳೂರು, ಮಾ.5-ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಿರ್ಮಾಣಗೊಂಡಿರುವ ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ಮಾ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ಕೇಂದ್ರ ವಿವಿ ಕುಲಪತಿ ಪೆÇ್ರ.ಎಸ್.ಜಾಫೆಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಂಟ್ರಲ್ ಕಾಲೇಜು ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸಲಾಗಿದ್ದು, ಅಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಕೇಂದ್ರ ವಿವಿಗೆ ಚಾಲನೆ ನೀಡುವರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್ಕುಮಾರ್, ನಿರ್ಮಲಾ ಸೀತಾರಾಮನ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಈ ವಿವಿಯಲ್ಲಿ ವ್ಯಾಸಂಗ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹನೀಯರನ್ನು ಗೌರವಿಸಲಾಗುವುದು.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ, ಎಚ್.ಎಸ್.ದೊರೆಸ್ವಾಮಿ, ಡಾ.ಡೊಡ್ಡಂ ನರಸಿಂಹ, ಪೆÇ್ರ.ಕೆ.ಎಸ್.ನಿಸಾರ್ ಅಹಮ್ಮದ್, ಎಂ.ಎಸ್.ಸತ್ಯು, ಡಾ.ಗೀತಾ ನಾರಾಯಣ್, ಕೆ.ಎನ್.ಹರಿಕುಮಾರ್, ಡಾ.ವಾಸುದೇವ ಕೆ.ಅತ್ರೆ, ಡಾ.ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸುವುದಾಗಿ ತಿಳಿಸಿದರು.
ಇದರೊಂದಿಗೆ ಬೆಂಗಳೂರು ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜು ಆಫ್ ಇಂಜಿನಿಯರಿಂಗ್ ಕಟ್ಟಡಗಳ ನವೀಕರಣ ಕಾಮಗಾರಿ ಶಂಕುಸ್ಥಾಪನೆ, ವಿವಿ ಅಧಿಕೃತ ವೆಬ್ಸೈಟ್, ಲಾಂಛನ ಗೀತೆಗೂ ಚಾಲನೆ ನೀಡುವರು.
ಹೊಸ ವಿವಿಗೆ ಸಂಬಂಧಿಸಿದಂತೆ ಮೂಲಸೌಕರ್ಯ, ನೌಕರರ ಮತ್ತು ಉಪನ್ಯಾಸಕರ ನೇಮಕಾತಿ ಒಳಗೊಂಡಂತೆ ಇನ್ನಿತರ ಯೋಜನೆಗಳ ಬಗ್ಗೆ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಇನ್ನೂ 15 ಕೋಟಿ ಅನುದಾನ ದೊರಕಿದೆ ಎಂದು ವಿವರಿಸಿದರು.