ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ವರಿಷ್ಠರು ದೆಹಲಿಗೆ

ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ವರಿಷ್ಠರು ದೆಹಲಿಗೆ
ಬೆಂಗಳೂರು, ಮಾ.5-ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಲು ಹೈಕಮಾಂಡ್ ಬುಲಾವ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಕಾಂಗ್ರೆಸ್ ವರಿಷ್ಠರು ದೆಹಲಿಗೆ ತೆರಳಲಿದ್ದಾರೆ.
ಮಾ.23ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ ಡಾ.ಜಿ.ಪರಮೇಶ್ವರ್ ಮತ್ತಿತರರು ದೆಹಲಿಗೆ ತೆರಳಲಿದ್ದಾರೆ.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಮೂರನೇ ಅಭ್ಯರ್ಥಿಯನ್ನು ನಿಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ಅಭ್ಯರ್ಥಿ ಯಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ ವಿಧಾನಸಭೆಯಿಂದ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲು ಮಾ.23 ರಂದು ಚುನಾವಣೆ ನಡೆಯಲಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬಂದಿತ್ತು. ಸ್ವತಃ ಮುಖ್ಯಮಂತ್ರಿಯವರೇ ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನಾಯಕರ ಬಳಿ ಚರ್ಚೆ ನಡೆಸಿದ್ದರು.
ಶಾಸಕರ ಬಲಾಬಲ ಆಧಾರದ ಮೇಲೆ ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸಬಹುದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷದ ಏಳು ಶಾಸಕರ ಬೆಂಬಲವೂ ಸಿಕ್ಕಿ ಒಟ್ಟು 3 ಅಭ್ಯರ್ಥಿಗಳ ಆಯ್ಕೆ ಮಾಡಬಹುದಾಗಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳು ಬೇಕಾಗುತ್ತದೆ.
ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿ, ಭವಿಷ್ಯದಲ್ಲಿ ನಮ್ಮ ಬೆಂಬಲ ನಿಮಗೆ ಸಿಗಲಿದೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದರು ಎಂಬ ಸುದ್ದಿ ಕೂಡ ಹಬ್ಬಿತ್ತು. ಆದರೆ ಕಳೆದೆರಡು ದಿನಗಳ ಹಿಂದೆ ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತ್ಯೇಕ ಮಾತುಕತೆ ನಡೆಸಿ ಮೈತ್ರಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಕೂಡ ನಡೆಸಿ ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಬೇಡ. ಮೂರನೇ ಅಭ್ಯರ್ಥಿಯನ್ನು ನಾವೇ ಕಣಕ್ಕಿಳಿಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದು, ಅಭ್ಯರ್ಥಿಗಳ ಆಯ್ಕೆಯನ್ನು ಸದ್ಯದಲ್ಲೇ ಅಂತಿಮಗೊಳಿಸಲಿದ್ದಾರೆ.
ಕೆ.ರೆಹಮಾನ್‍ಖಾನ್, ರಾಜೀವ್‍ಚಂದ್ರಶೇಖರ್, ಬಸವರಾಜ ಪಾಟೀಲ್ ಸೇಡಂ, ಆರ್.ರಾಮಕೃಷ್ಣ ಅವರ ಅವಧಿ ಏ.2ಕ್ಕೆ ಮುಗಿಯಲಿದೆ.
ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಮುಗಿದಿದೆ. ಕಾಂಗ್ರೆಸ್‍ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದು, ರೋಷನ್‍ಬೇಗ್, ರೆಹಮಾನ್‍ಖಾನ್, ಸಲೀಂ ಅಹಮ್ಮದ್, ರಾಣಿ ಸತೀಶ್, ನಂಜಯ್ಯ ಮಠ್, ಎ.ಬಿ.ಮಾಲಕರೆಡ್ಡಿ, ಶ್ಯಾಮನೂರು ಶಿವಶಂಕರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸ್ಪೀಕರ್ ಮೀರಾಕುಮಾರಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ರಾಜ್ಯಸಭೆಗೆ ಯುವಕರು, ಉತ್ತಮ ಸಂಸದೀಯ ಪಟುಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಯುವಕರಿಗೆ ಆದ್ಯತೆ ನೀಡಬೇಕೆಂಬ ಕೂಗು ಕೂಡ ಕೇಳಿ ಬಂದಿದೆ. ಯಾರಿಗೆ ಟಿಕೆಟ್ ಸಿಗಲಿದೆ, ಯಾರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ