ರಾಷ್ಟ್ರೀಯ ನಾಯಕರ ಕೈಗೊಂಬೆಗಳಾದ ರಾಜ್ಯ ಬಿಜೆಪಿ ನಾಯಕರು

ರಾಷ್ಟ್ರೀಯ ನಾಯಕರ ಕೈಗೊಂಬೆಗಳಾದ ರಾಜ್ಯ ಬಿಜೆಪಿ ನಾಯಕರು
ಬೆಂಗಳೂರು,ಮಾ.5- ಕಾಂಗ್ರೆಸ್ ಮುಕ್ತ ಕನಸು ಕಾಣುತ್ತಿರುವ ರಾಷ್ಟ್ರೀಯ ಬಿಜೆಪಿ ನಾಯಕರು ಇದೀಗ ಕರ್ನಾಟಕದಲ್ಲಿ ಸಂಪೂರ್ಣವಾಗಿ ತಮ್ಮ ಹಿಡಿತ ಸಾಧಿಸಿದ್ದಾರೆ. ಇವರು ಆಡಿಸಿದ ರೀತಿ ರಾಜ್ಯ ಬಿಜೆಪಿ ನಾಯಕರು ಆಡುವ ಸ್ಥಿತಿ ನಿರ್ಮಾಣವಾಗಿದೆ ಎಂದೇ ಹೇಳಲಾಗುತ್ತಿದೆ.
ರಾಷ್ಟ್ರೀಯ ನಾಯಕರ ಮಾತಿಗೆ ಎದುರಾಡುವಂತಿಲ್ಲ, ಸ್ವತಂತ್ರವಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳಲು ಆಗುತ್ತಿಲ್ಲ. ಅಕ್ಷರಶಃ ರಾಜ್ಯ ಬಿಜೆಪಿ ನಾಯಕರಿಗೆ ಈ ಬಾರಿಯ ಚುನಾವಣೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ಕೇಂದ್ರ ನಾಯಕರ ಕೈಲಿ ತಮ್ಮ ಜುಟ್ಟನ್ನು ಕೊಟ್ಟು ಆಡಿಸಿಕೊಳ್ಳುವ ಸ್ಥಿತಿ ನಿರ್ಮಾಣಗಿದ್ದು, ಅಡಗತ್ತರಿಯಲ್ಲಿ ಸಿಲುಕಿದಂತಾಗಿದೆ ರಾಜ್ಯ ಬಿಜೆಪಿ ನಾಯಕರ ಸ್ಥಿತಿ. ಪ್ರತಿಯೊಂದಕ್ಕೂ ಹೈಕಮಾಂಡ್ ಸೂಚನೆಗೆ ಕಾಯುವ ಸ್ಥಿತಿಯಿದ್ದು, ಆಂತರಿಕ ಕಿತ್ತಾಟ, ಸಮರ್ಥ ನಾಯಕತ್ವದ ಕೊರತೆ, ಹುಂಬತನ, ಸ್ವಾರ್ಥ, ಕೇವಲ ತಾನೊಬ್ಬನೇ ನಾಯಕತ್ವ ವಹಿಸಬೇಕೆಂಬ ಹಪಾಹಪಿ ರಾಜ್ಯ ನಾಯಕರಿಗೆ ಈ ಸ್ಥಿತಿ ತಂದಿಟ್ಟಿದೆ ಎನ್ನಲಾಗಿದೆ.
ಸಾಂಗಿಕವಾಗಿ ಹೋರಾಡುವ ಅವಕಾಶ ಇದ್ದೂ ಒಂದಾಗದೇ ಕಿತ್ತಾಡಿಕೊಂಡು ಒಂದು ಹಂತದಲ್ಲಿ ಬಿಜೆಪಿ,ರಾಜ್ಯದಲ್ಲಿ ಜನರ ಮನಸ್ಸಿನಿಂದ ದೂರವಾಗುವ ಲಕ್ಷಣ ಗೋಚರಿಸಿದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯವನ್ನು ತಮ್ಮ ಹಿಡಿತಕ್ಕೆ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ.
ಕೇಂದ್ರದ ಹಿಡಿತ:
ತಮ್ಮ ಮಾತನ್ನು ಕೇಳುವ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಪಿಯೂಶ್ ಗೋಯಲ್‍ರನ್ನು ರಾಜ್ಯ ವಿಧಾನಸಭೆ ಚುನಾವಣೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನಾಗಿ ನೇಮಿಸಿತು. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್‍ಗೆ ಹೆಚ್ಚಿನ ಬಲ ತಂದುಕೊಟ್ಟಿತು. ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಹಲವು ನಾಯಕರನ್ನು ರಾಜ್ಯದ ಜಿಲ್ಲಾ ಮಟ್ಟದ ನಾಯಕತ್ವ ನೀಡಿ ಕಳಿಸಿಕೊಟ್ಟಿದೆ. ಒಟ್ಟಾರೆ ಕೇಂದ್ರದಿಂದ ಬಂದಿರುವ ನಾಯಕರ, ನಾಯಕತ್ವದ ಹಾಗೂ ಮಾರ್ಗದರ್ಶನದ ಅಡಿ ರಾಜ್ಯ ಬಿಜೆಪಿ ನಾಯಕರು ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ.
ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯದ ಗೆಲುವಿನಿಂದಾಗಿ ಇನ್ನಷ್ಟು ಉತ್ಸಾಹಿತರಾಗಿರುವ ರಾಷ್ಟ್ರೀಯ ನಾಯಕರು, ಮುಂದಿನ ಟಾರ್ಗೆಟ್ ಆಗಿರುವ ಕರ್ನಾಟಕದತ್ತ ಮುಂದಿನ ದಿನಗಳಲ್ಲಿ ಇನ್ನಷ್ಟು ಒತ್ತಡ ಹೆಚ್ಚಿಸಲಿದ್ದು, ಈಗಾಲಗೇ ಬಳಲಿರುವ ರಾಜ್ಯ ಬಿಜೆಪಿ ನಾಯಕರು ಹೈರಾಣಾಗಲಿದ್ದಾರೆ.
ಟಾಸ್ಕ್ ಮೇಲೆ ಟಾಸ್ಕ್
ಒಂದರ ಮೇಲೊಂದು ಟಾಸ್ಕ್‍ಗಳನ್ನು ರಾಷ್ಟ್ರೀಯ ನಾಯಕರು ಹೇರುತ್ತಲೇ ಇದ್ದು, ಇದನ್ನು ಸಹಿಸಿಕೊಂಡು ಸಾಗುವ ಸ್ಥಿತಿ ರಾಜ್ಯ ನಾಯಕರದ್ದಾಗಿದೆ. ಪ್ರತಿರೋಧಿಸುವಂತಿಲ್ಲ, ಹೇಳಿದ್ದನ್ನು ಮಾಡದೇ ಕೂರುವಂತೆಯೂ ಇಲ್ಲ. ರಾಜ್ಯ ನಾಯಕರ ಸ್ಥಿತಿ ಅಕ್ಷರಶಃ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ. ಹೈಕಮಾಂಡ್ ನಾಯಕರ ಸೂತ್ರದ ಬೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ.
ವಿಪರ್ಯಾಸ ಎಂದರೆ ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೂಡ ಇದೀಗ ರಾಷ್ಟ್ರೀಯ ನಾಯಕರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಅದನ್ನು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರೇ ಬಾಯಿ ಬಿಟ್ಟಿದ್ದಾರೆ.
ವರದಿ ಬಂದಿದೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದಾಗಲೇ ಎಬಿಎಂ ಅನ್ನುವ ಸಂಸ್ಥೆಯಿಂದ ರಾಜ್ಯದ ಸ್ಥಿತಿಗತಿಯ ಪ್ರಾದೇಶಿಕ ವರದಿಯನ್ನು ತರಿಸಿಕೊಂಡಿದ್ದಾರೆ. ಅದು ರಾಜ್ಯ ನಾಯಕರಿಗೆ ಕೂಡ ಗೊತ್ತಿಲ್ಲ. ಅಧ್ಯಯನ ವರದಿ ಆಧರಿಸಿ ಅಮಿತ್ ಶಾ ಅದಾಗಲೇ ರಾಜ್ಯ ನಾಯಕರಿಗೆ ಬೆಂಗಳೂರು ರP್ಷÁ ಯಾತ್ರೆ, ಜನಸುರP್ಷÁ ಪಾದಯಾತ್ರೆ, ಕಮಲ ಯಾತ್ರೆ, ಮುಷ್ಠಿ ಧಾನ್ಯ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿ ಅಲ್ಲಿಂದಲೇ ಅದನ್ನು ಆಚರಣೆಗೆ ತರುವ ಕಾರ್ಯ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ