ಬೆಂಗಳೂರು, ಮಾ.5-ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರಿಗಳು ಹಾಗೂ ಲೂಟಿಕೋರರ ಪರ ಇದೆ ಎಂಬುದನ್ನುಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಈ ಹಿಂದೆ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಪಾಲಾಗಿದ್ದ ಶಾಸಕರಾದ ಆನಂದ್ ಸಿಂಗ್ ಹಾಗೂ ಬಿ.ನಾಗೇಂದ್ರ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡಾಗಲೇ ಕಾಂಗ್ರೆಸ್ ಮುಖವಾಡ ಬಯಲಾಗಿತ್ತು. ಇದೀಗ ಬಿಎಂಐಸಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ಅಶೋಕ್ ಖೇಣಿಯನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ನೈತಿಕ ದಿವಾಳಿತನ ಪ್ರದರ್ಶಿಸಿದೆ ಎಂದು ಹರಿಹಾಯ್ದರು.
ಬೆಂಗಳೂರು ರಕ್ಷಿಸಿ ಪಾದಯಾತ್ರೆ ಹಮ್ಮಿಕೊಂಡಿರುವ ಬಿಜೆಪಿ ಇಂದು ಸರ್.ಸಿ.ವಿರಾಮನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಭ್ರಷ್ಟಾಚಾರ ನಡೆಸಿರುವವರನ್ನೇ ಅಕ್ಕಪಕ್ಕ ಕೂರಿಸಿಕೊಂಡು ಇನ್ನೊಂದು ಪಕ್ಷದ ಬಗ್ಗೆಯಾಗಲಿ ಇಲ್ಲವೇ ಇನ್ನೊಬ್ಬರ ಬಗ್ಗೆ ಮಾತನಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಶೋಕ್ ಖೇಣಿಯನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡಿರುವುದು ಬಿಜೆಪಿಗೇ ಅನುಕೂಲವಾಗಲಿದೆ. ಬಿಎಂಐಸಿ ಯೋಜನೆಯಲ್ಲಿ ಲಪಟಾಯಿಸಿರುವ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಲು ಅವರು ಹೋಗಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಬೆಂಗಳೂರು ಮಹಾನಗರದಲ್ಲಿ ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಧೂಳಿಪಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಎಂಐಸಿ ಯೋಜನೆಯಡಿ ರೈತರ ಜಮೀನು ಕಬಳಿಸಿ ನೂರಾರು ಕೋಟಿ ಲೂಟಿ ಹೊಡೆದಿರುವ ಖೇಣಿ ತಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಹಾಗೂ ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಲಾಕ್ಮೇಲ್ ಮೇಲೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಹಿಂದೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಆನಂದ್ ಸಿಂಗ್ ಹಾಗೂ ನಾಗೇಂದ್ರ ಅವರನ್ನು ಇದೇ ಸಿದ್ದರಾಮಯ್ಯ ಜೈಲಿಗೆ ಹೋದವರೆಂದು ಟೀಕೆ ಮಾಡುತ್ತಿದ್ದರು. ಈಗ ನಮ್ಮ ಪಕ್ಷಕ್ಕೆ ಬರದಿದ್ದರೆ ಎಸ್ಐಟಿ ಮೂಲಕ ಬಂಧಿಸುವ ಬೆದರಿಕೆ ಹಾಕುತ್ತಿದ್ದಾರೆ. ಬಹಳ ದಿನಗಳ ಕಾಲ ಇದು ನಡೆಯುವುದಿಲ್ಲ ಎಂದು ಲಿಂಬಾವಳಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ಗೆ ಸೇರ್ಪಡೆಯಾದರೆ ನಿಮ್ಮ ಮೇಲಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚು ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಯಾರಾದರೂ ಪಕ್ಷಕ್ಕೆ ಸೇರ್ಪಡೆಯಾಗದಿದ್ದರೆ ಅವರಿಗೆ ಬೇರೆ ಬೇರೆ ಮಾರ್ಗಗಳ ಮೂಲಕ ಬ್ಲಾಕ್ಮೇಲ್ ಮಾಡಲಾಗುತ್ತದೆ. ಎಷ್ಟು ದಿನಗಳವರೆಗೆ ಇಂತಹ ಆಟ ಆಡುತ್ತೀರಿ ಎಂದು ಪ್ರಶ್ನಿಸಿದರು.
ಬಿಎಂಐಸಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ಖೇಣಿಯನ್ನು ಆರೋಪಗಳಿಂದ ಮುಕ್ತಗೊಳಿಸಲು ಸೇರ್ಪಡೆ ಮಾಡಿಕೊಂಡಿರಬಹುದು. ಇದರ ಪಾಪದ ಫಲವನ್ನು ಕಾಂಗ್ರೆಸ್ ಅನುಭವಿಸುತ್ತದೆ ಎಂದು ಹಿಡಿ ಶಾಪ ಹಾಕಿದರು.
ಬೆಂಗಳೂರು ರಕ್ಷಿಸಿ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಂಸದ ಪಿ.ಸಿ.ಮೋಹನ್, ಶಾಸಕ ರಘು ಸೇರಿದಂತೆ ಮತ್ತಿತರರು ಸರ್.ಸಿ.ವಿ.ರಾಮನ್ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀಪುರದಿಂದ ಪಾದಯಾತ್ರೆಯನ್ನು ಆರಂಭಿಸಿದರು.
ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ದುರಾಡಳಿತ ಎಂಬ ಕರಪತ್ರವನ್ನು ಜನರಿಗೆ ಹಂಚಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ವ್ಯಾಪಾರಸ್ಥರು, ಗ್ರಾಹಕರು, ರಸ್ತೆಬದಿ ತರಕಾರಿ ಮಾರುತ್ತಿದ್ದವರು, ಅಂಗಡಿಮುಂಗಟ್ಟುಗಳು ಮತ್ತಿತರ ಕಡೆ ಕಾರ್ಯಕರ್ತರು ಕಾಂಗ್ರೆಸ್ ದುರಾಡಳಿತ, ಶಾಸಕ ಎನ್.ಎ.ಹ್ಯಾರೀಸ್ ಅವರ ಪುತ್ರ ನಲಪಾಡ್ ಪ್ರಕರಣವನ್ನೇ ಪ್ರದಾನವಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು.