ಬೆಂಗಳೂರು ರಕ್ಶಿಸಿ ಪಾದಂಯಾತ್ರೆ ಬಿಜೆಪಿ ಕಾಲದಲ್ಲಿನ ಅವಘಡ ಹಾಗೂ ಅದ್ವಾನಗಳನ್ನು ಮುಚ್ಚಿಹಾಕುವ ಪ್ರಯತ್ನ: ಗೃಹ ಸಚಿವ ರಾಮಲಿಂಗಾರೆಡ್ಡಿ ಟಾಂಗ್
ಬೆಂಗಳೂರು,ಮಾ.4- ನಿಮ್ಮ ಆಡಳಿತಾವಧಿಯಲ್ಲಿ ಬೆಂಗಳೂರಿನಲ್ಲಿ ಬದುಕಲು ರಕ್ಷಣೆ ಸಿಗದೆ ಈಶಾನ್ಯ ಭಾರತದ ನಿವಾಸಿಗಳು ರಾತ್ರೋರಾತ್ರಿ ಗುಳೆ ಹೋಗಿರುವುದನ್ನು ನೀವು ಮರೆತಿರಬಹುದು ಎಂದು ಬಿಜೆಪಿ ಮುಖಂಡ, ಮಾಜಿ ಗೃಹ ಸಚಿವ ಆರ್.ಅಶೋಕ್ ಅವರಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದಾರೆ.
ರಾಜಧಾನಿ ಬೆಂಗಳೂರು ಅಸುರಕ್ಷಿತ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಗೃಹ ಸಚಿವ ಆರ್.ಅಶೋಕ್ ಸುಳ್ಳು ಪ್ರಚಾರದ ಪಾದಯಾತ್ರೆ ಪ್ರಾರಂಭಿಸಿರುವುದು ಬಿಜೆಪಿ ಕಾಲದಲ್ಲಿನ ಅವಘಡ ಹಾಗೂ ಅದ್ವಾನಗಳನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ರಕ್ಷಣೆ ಇಲ್ಲ ಎಂದು ಈಶಾನ್ಯ ಭಾರತದ ಸಾವಿರಾರು ಮಂದಿ ಬೆಂಗಳೂರು ಬಿಟ್ಟು ಗುಳೆ ಹೊರಟಿದ್ದು ನಿಮ್ಮ ಕಾಲದಲ್ಲಿ ಅಲ್ಲವೆ ಎಂದು ಅವರು ಹೇಳಿದ್ದಾರೆ.
ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಅವರು ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದಲ್ಲೇ ಬಿಬಿಎಂಪಿ ಸದಸ್ಯ ದಿವಾನ್ ಆಲಿ ಅವರ ಕೊಲೆಯಾಯಿತು. ಇದನ್ನು ತಡೆಯಲು ಅವರ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ. ಅಲ್ಲದೆ, ಕಾಂಗ್ರೆಸ್ ಬಿಬಿಎಂಪಿ ಸದಸ್ಯ ನಟರಾಜ್ ಅವರನ್ನು ಹಾಡಹಗಲೇ ಕೊಲೆ ಮಾಡಿದ್ದು ನಿಮ್ಮ ಬಿಜೆಪಿ ಮುಖಂಡನಲ್ಲವೆ, ಆ ಆರೋಪಿ ಪರ ಪ್ರಚಾರ ನೀವು ಮಾಡಿರಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಇನ್ನೋರ್ವ ಕಾಂಗ್ರೆಸ್ ಬಿಬಿಎಂಪಿ ಸದಸ್ಯ ಗೋವಿಂದರಾಜ್ ಮೇಲೆ ಮಾರಣಾಂತಿಕ ಹಲ್ಲೆ ಸೇರಿದಂತೆ ನಡೆದ ಹಲವು ಪ್ರಕರಣಗಳನ್ನು ತಡೆಯಲು ನಿಮ್ಮಿಂದ ಏಕೆ ಸಾಧ್ಯವಾಗಲಿಲ್ಲ, ನೀವು ಗೃಹ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ, ಕೊಲೆ, ಗ್ಯಾಂಗ್ವಾರ್ಗಳು ಎಷ್ಟೆಂಬುದರ ಬಗ್ಗೆ ಬಹಿರಂಗ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಅಪರಾಧ ಪ್ರಕರಣಗಳಲ್ಲಿ ರಾಜಕೀಯ ಮಾಡುತ್ತಿರುವ ನಿಮ್ಮ ನಡೆಯನ್ನು ಜನ ಗಮನಿಸುತ್ತಿದ್ದಾರೆ.
ಬೆಂಗಳೂರಿನ ಸುರಕ್ಷತೆ ಬಗ್ಗೆ ನಿಮಗೆ ಕಾಳಜಿ ಇದ್ದರೆ ಖಾಲಿ ಇದ್ದ ಪೆÇಲೀಸ್ ಹುದ್ದೆಗಳನ್ನು ನೇಮಕ ಮಾಡುತ್ತಿದ್ದಿರಿ. ರಾಜ್ಯದ ಕಾನೂನು-ಸುವ್ಯವಸ್ಥೆ ಕಾಪಾಡಲು 30 ಸಾವಿರ ಸಿಬ್ಬಂದಿ ನೇಮಕಾತಿಯ ತುರ್ತು ಅಗತ್ಯವಿದ್ದರೂ ಅದರ ಗೋಜಿಗೆ ಹೋಗದೆ ಎಷ್ಟರ ಮಟ್ಟಿಗೆ ಗೃಹ ಸಚಿವರಾಗಿ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 30 ಸಾವಿರಕ್ಕೂ ಹೆಚ್ಚು ಪೆÇಲೀಸ್ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇವೆ. ರಾಜ್ಯದ ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇವೆ. ಅಧಿಕಾರದ ಹಗಲುಗನಸು ಕಾಣುತ್ತಿರುವ ನಿಮಗೆ ರಾಜ್ಯದ ಜನ ಮತ್ತೆ ವಿರೋಧ ಪಕ್ಷದ ಸ್ಥಾನ ನೀಡಲಿದ್ದಾರೆ ಎಂದು ಹೇಳಿದ್ದಾರೆ.