ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು :ಸಚಿವ ಆರ್. ರಾಮಲಿಂಗಾರೆಡ್ಡಿ
ಬೆಂಗಳೂರು, ಮಾ.4- ಇತ್ತೀಚಿನ ದಿನಗಳಲ್ಲಿ ಜನರು ಪತ್ರಿಕಾ ರಂಗವನ್ನು ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಮಾಧ್ಯಮ ಆಸ್ಪದ ನೀಡಬಾರದು. ಸರ್ಕಾರಗಳು ತಪ್ಪು ದಾರಿಗೆ ಹೋಗುವಾಗ ಎಚ್ಚರಿಸುವ ಕೆಲಸ ಮಾಡಬೇಕು ಎಂದು ಗೃಹ ಸಚಿವ ಆರ್. ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದ್ದಾರೆ.
ಈ ಸಂಜೆ ಪತ್ರಿಕೆ ಮುಖ್ಯ ವರದಿಗಾರ ಬಿ.ಎಸ್.ರಾಮಚಂದ್ರ ಸೇರಿದಂತೆ ಮುದ್ರಣ ಮತ್ತು ವಿದ್ಯುನ್ಮಾನದ 10 ಸಾಧಕರಿಗೆ ನ್ಯೂಸ್ ಮೀಡಿಯಾ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ವರಿಗೆ ನ್ಯೂಸ್ ಮೀಡಿಯಾ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬೆಂಗಳೂರಿನಲ್ಲಿ ನಿನ್ನೆ ಸಂಜೆ ನ್ಯೂಸ್ ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿ.ಎಸ್.ರಾಮಚಂದ್ರ, ಶಿವಾನಂದ ತಗಡೂರು, ಜ್ಯೋತಿ ಇರ್ವತ್ತೂರು, ಗಣೇಶ್.ಜಿ ಅನಿಲ್ ಕುಮಾರ್, ಗಣೇಶ್ ಮೊಕಾಶಿ, ಪಿ.ನಂದಕಿಶೋರ್ ಸೇರಿದಂತೆ ಸಾಧಕರಿಗೆ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುದ್ದಿ ಮತ್ತು ವರದಿಗಳನ್ನು ಪ್ರಕಟಿಸುವಾಗ ಅದರ ಸತ್ಯಾಸತ್ಯತೆಯನ್ನು ಅರಿಯಬೇಕು. ಪ್ರಜಾಪ್ರಭುತ್ವದಲ್ಲಿ ನಾಲ್ಕನೆ ಮಹತ್ವದ ಅಂಗವಾದ ಪ್ರತಿಕಾರಂಗ ಮತ್ತಷ್ಟು ದೃಢವಾಗಿ ಬೆಳೆಯಬೇಕು ಎಂದರು.
ಯಾವುದೇ ಸನ್ಮಾನ-ಪುರಸ್ಕಾರವು ಸನ್ಮಾನಿತರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ ಉತ್ತಮ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಗುರುತಿಸಿ ಸನ್ಮಾನಿಸಿದರೆ ಅವರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಶಂಕರಮೂರ್ತಿ ಹೇಳಿದರು.
ಪತ್ರಕರ್ತರ ವೈದ್ಯಕೀಯ ನಿಧಿಗೆ 1 ಕೋಟಿ ರೂ.:
ಮೇಯರ್ ಸಂಪತ್ರಾಜ್ ಮಾತನಾಡಿ, ಮಾಧ್ಯಮಗಳು ಸುದ್ದಿ ಸಂಗತಿಗಳ ವಿಷಯದಲ್ಲಿ ಕಣ್ಗಾವಲಿನಂತೆ ಕೆಲಸ ಮಾಡುತ್ತವೆ. ಎಲ್ಲ ಕ್ಷೇತ್ರಗಳಲ್ಲೂ ಟೀಕೆ-ಟಪ್ಪಣಿಗಳು ಸಹಜ. ಮಾಧ್ಯಮದವರ ಪಾತ್ರ ಮತ್ತು ಜವಾಬ್ದಾರಿ ದೊಡ್ಡದು ಎಂದು ಪ್ರಶಂಸಿಸಿದರು.
ಪತ್ರಕರ್ತರು ಮತ್ತು ಮಾಧ್ಯಮದವರ ಕಲ್ಯಾಣಕ್ಕಾಗಿ ವೈದ್ಯಕೀಯ ನಿಧಿಗೆ 1 ಕೋಟಿ ರೂ.ಗಳು ಹಾಗೂ ಮಾಧ್ಯಮ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ.ಗಳ ಅನುದಾನವನ್ನು ಬಿಬಿಎಂಪಿ ಬಜೆಟ್ನಲ್ಲಿ ಮೀಸಲಿರಿಸಲಾಗಿದೆ ಎಂದು ಮಹಾಪೌರರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ನ್ಯೂಸ್ ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ವೆಂಕಟೇಶ್ ಪೈ, ಉಪಾಧ್ಯಕ್ಷ ಸುಧಾಕರ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.