101 ಜೋಡಿಗಳ ಸಾಮೂಹಿಕ ವಿವಾಹ
ವಿಜಯಪುರ, ಮಾ.4-ವಿಜಯಪುರ ಜಿಲ್ಲೆಯ ಸಿಂಧಗಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಭವದ 101 ಜೋಡಿಗಳ ಸಾಮೂಹಿಕ ವಿವಾಹಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಡಾ.ಮಂಜುಳಾ ಫೌಂಡೇಶನ್ ಸಿಂದಗಿ ಅವರ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹಕ್ಕೆ ಎಂ.ಬಿ.ಪಾಟೀಲ್, ಎಚ್.ಎಂ.ರೇವಣ್ಣ, ಡಿ.ಕೆ.ಶಿವಕುಮಾರ್, ರೋಷನ್ಬೇಗ್ ಸೇರಿದಂತೆ ಹಲವು ಸಚಿವರು, ಸಂಸದರು, ಶಾಸಕರು ಸಾಕ್ಷಿಯಾದರು.
ಡೊಳ್ಳು ಬಾರಿಸುವ ಮೂಲಕ ಡಿ.ಕೆ.ಶಿವಕುಮಾರ್ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನಕ ಗುರುಪೀಠದ ಶ್ರೀ ಪಿಂತಣಿ ಬ್ರಿಜ್ ಸಿದ್ದರಾಮನಪುರಿ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಆನಂದ್ ಗುರೂಜಿಯವರು ಆಶೀರ್ವಚನ ನೀಡಿದರು. ಸಾನಿಧ್ಯವನ್ನು ಶ್ರೀ ಪ್ರಭುದೇವ ಸಾರಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಅಲ್ಲದೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
101 ಜೋಡಿಯಲ್ಲಿ ಮೂರು ಮುಸ್ಲಿಂ ಜೋಡಿ ಇದ್ದುದು ವಿಶೇಷವಾಗಿತ್ತು.
ನಟ ದುನಿಯಾ ವಿಜಯ್, ನಿರ್ದೇಶಕ ಆರ್.ಚಂದ್ರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಶಕ್ತಿ ಪ್ರದರ್ಶನ: ಮೂಲತಃ ಬೆಂಗಳೂರಿನವರಾದ ಸಚಿವ ಎಚ್.ಎಂ.ರೇವಣ್ಣ ಅವರ ಸಹೋದರನ ಪುತ್ರಿ ಡಾ.ಮಂಜುಳಾ ಗೋವರ್ಧನ ಮೂರ್ತಿ ಅವರು ಸಿಂಧಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಸಾಮೂಹಿಕ ವಿವಾಹ ಮಹೋತ್ಸವದ ನಂತರ ಶಕ್ತಿ ಪ್ರದರ್ಶನ ಮಾಡಿದರು.
ಕಳೆದ ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಡಾ.ಮಂಜುಳ ಗೋವರ್ಧನಮೂರ್ತಿ ಸಿಂದಗಿಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಇದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರೇರಣೆ ಅವರು ಹೇಳಿಕೊಳ್ಳುತ್ತಾರೆ.
ಸಿದ್ದರಾಮಯ್ಯ ಹಾಗೂ ಎಚ್.ಎಂ.ರೇವಣ್ಣ ಅವರ ಸಹಯೋಗ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾರ್ಗದರ್ಶನದಲ್ಲಿ ಸಿಂಧಗಿ ತಾಲೂಕಿನಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ.
ಎಂಟು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು, 26 ತಾ.ಪಂ. ಕ್ಷೇತ್ರಗಳು, 36 ಗ್ರಾ.ಪಂ. ಪಂಚಾಯಿತಿಗಳು, ಒಂದು ಪುರಸಭೆಯನ್ನು ಹೊಂದಿರುವ ಸಿಂಧಗಿಯಲ್ಲಿ 38 ಸಾವಿರ ಕುರುಬರು, 35 ಸಾವಿರ ಮುಸ್ಲಿಮರು, 30 ಸಾವಿರ ಗಾಣಿಗರು, ಎಸ್ಸಿ-ಎಸ್ಟಿ 26 ಸಾವಿರಕ್ಕೂ ಹೆಚ್ಚು ಇದ್ದಾರೆ. ಇದಲ್ಲದೆ ಇತರೆ ಜನಾಂಗದವರೂ ಇದ್ದಾರೆ.
ಅತಿ ಹೆಚ್ಚು ಕುರುಬರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಡಾ.ಮಂಜುಳಾ ಸಕ್ರಿಯವಾಗಿ ತೊಡಗಿಕೊಂಡಿದ್ದು, ಜನಬೆಂಬಲವೂ ಇದೆ.
ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಫೈಟ್ ಇದ್ದರೆ ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಅತ್ಯಂತ ಸರಳತೆಯುಳ್ಳವರಾದ ಇವರು ವೃತ್ತಿಯಲ್ಲಿ ವೈದ್ಯೆ. ಬಡವರ ಸೇವೆಗಾಗಿಯೇ ಹುಟ್ಟಿದ ಮಹಿಳೆ ಎಂದು ಎಲ್ಲರೂ ಕೊಂಡಾಡುತ್ತಾರೆ.
ತಾವು ಸರಳ ವಿವಾಹವಾಗಿದ್ದ ಇವರು ತಾವೇ ಫೌಂಡೇಶನ್ ಸ್ಥಾಪಿಸಿ ಈ ಮೂಲಕ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸಿ ಬಡ ಜನರಿಗೆ ನೆರವಾಗುತ್ತಿದ್ದಾರೆ.
ರಾಜ್ಯಸರ್ಕಾರದ ಸಹಯೋಗದಲ್ಲಿ ಬಿಜಾಪುರ ಜಿಲ್ಲೆಯಲ್ಲೇ ಸಿಂದಗಿ ತಾಲೂಕನ್ನು ಮಾದರಿಯನ್ನಾಗಿ ಮಾಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.
ಹರಿದು ಬಂದು ಜನಸಾಗರ : ಸಾಮೂಹಿಕ ವಿವಾಹ ಹಾಗೂ ಶಕ್ತಿ ಪ್ರದರ್ಶನ ಕಾರ್ಯಕ್ರಮಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಜನಸಾಗರವೇ ಹರಿದುಬಂದಿದೆ.