ಬೆಂಗಳೂರು,ಮಾ.4- ಕಡಿಮೆ ದರದಲ್ಲೇ ನೀವು ಕೇಳಿರುವ ಜಾಗವನ್ನು ಒಕ್ಕೂಟಕ್ಕಾಗಿ ಭೋಗ್ಯಕ್ಕೆ ಕೊಡಿಸುವ ವ್ಯವಸ್ಥೆ ಮಾಡಿಕೊಡುವುದರೊಂದಿಗೆ ಆರೋಗ್ಯ ವಿಮೆಯಂತಹ ಸೌಲಭ್ಯಕ್ಕಾಗಿ ನಿಧಿ ಒದಗಿಸುವ ಕುರಿತಂತೆ ಮೇಯರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಶಾಸಕ ದಿನೇಶ್ ಗುಂಡೂರಾವ್ ಇಂದಿಲ್ಲಿ ನೀಡಿದರು.
ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ವತಿಯಿಂದ ನಗರದಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಅಧ್ಯಕ್ಷರು ಮಾಡಿದ್ದ ಮನವಿಗೆ ಎಲ್ಲ ರೀತಿಯಲ್ಲೂ ಸ್ಪಂದಿಸಿ ನೆರವು ನೀಡುವ ವಿಶ್ವಾಸ ವ್ಯಕ್ತಪಡಿಸಿದರು.
ಗಾಂಧಿನಗರದ ಕನಿಷ್ಕ ಹೋಟೆಲ್ ಪಕ್ಕದಲ್ಲಿರುವ ಜಾಗದಲ್ಲಿ ಸಂಘದ ಕಚೇರಿಯನ್ನು ಎಂದಿನಂತೆ ಕಾರ್ಯ ನಿರ್ವಹಿಸಲು ಅನುವುವಾಗುವಂತೆ ಈ ಜಾಗ ಭೋಗ್ಯ ಮಾಡಿಕೊಡುವ ಸಂಬಂಧ ಮೇಯರ್ ಅವರೊಂದಿಗೆ ಮಾತನಾಡುತ್ತೇನೆ. ಜೊತೆಗೆ ಕಡಿಮೆ ದರದಲ್ಲೇ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರು.
ಬಿಬಿಎಂಪಿ ವತಿಯಿಂದ ಆರೋಗ್ಯ ವಿಮೆ ಸೇರಿದಂತೆ ಕಾರ್ಮಿಕರ, ತಂತ್ರಜ್ಞರ, ಕಲಾವಿದರ, ಭವಿಷ್ಯಕ್ಕಾಗಿ ನಿಧಿ ಸ್ಥಾಪಿಸುವ ಚಿಂತನೆಯಡಿ ಕೋರಿರುವ ಮೊತ್ತದ ಬಗ್ಗೆಯೂ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ. ಇನ್ನು ವಸತಿ ಸೌಲಭ್ಯ ಕುರಿತಂತೆ ವಸತಿ ಸಚಿವರೊಂದಿಗೆ ಚರ್ಚಿಸುತ್ತೇನೆ. ಎಲ್ಲ ರೀತಿಯಲ್ಲಿ ನೆರವು ನೀಡಲು ಬದ್ಧ ಎಂದು ತಿಳಿಸಿದರು.
ಈ ವಿಚಾರವನ್ನು ಹಂತ ಹಂತವಾಗಿ ಪೂರೈಸಲು ಅಂಬರೀಶ್ ಅವರು ನಮ್ಮ ಜೊತೆಯಲ್ಲಿರಲಿ ಮಂಗಳವಾರ ಈ ಸಂಬಂಧ ಸಭೆ ನಡೆಸುತ್ತೇನೆ. ನೀವು ಅಧಿಕೃತವಾಗಿ ಕೈಗೊಳ್ಳಬೇಕಾದ ಎಲ್ಲ ಕೆಲಸಗಳನ್ನು ಮುಂದುವರೆಸಿ ಎಂದು ಹೇಳಿದರು.
ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟಕ್ಕೆ ಜಾಗವನ್ನು 30 ವರ್ಷಗಳ ಭೋಗ್ಯಕ್ಕೆ ಮಾಡಿಕೊಡುವಂತೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒಕ್ಕೂಟದ ಅಧ್ಯಕ್ಷ ಕೃಷ್ಣಮೂರ್ತಿ ಮಾಡಿದ ಮನವಿಗೆ ಮೇಲಿನಂತೆ ಪ್ರಕ್ರಿಯೆ ನೀಡಿದ್ದರಿಂದ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಅವರ ಸ್ವಾಗತಾರ್ಹ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಹಾಗೂ ಹಿರಿಯ ನಟ ಅಂಬರೀಶ್ ಮಾತನಾಡಿ, ಮುಖ್ಯಮಂತ್ರಿಗಳು ಸಿನಿಮಾ ಕ್ಷೇತ್ರದವರಿಗಾಗಿ ಸಾಕಷ್ಟು ಅನುಕೂಲ ಕಲ್ಪಿಸಿದ್ದಾರೆ. ಕಾರ್ಮಿಕರಿಗಾಗಿ 583 ಎಕರೆ ಜಾಗದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಿದ್ದಾರೆ. ಅದನ್ನು ಪಡೆಯಲು ಮುಂದಾಗಿ. ಈ ಸಂಬಂಧ ನಾನು ಸಹ ವಸತಿ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಅವರ ಸಹಕಾರ ನೀಡಿದರೆ ಎಲ್ಲವೂ ನೆರವೇರಲಿದೆ ಎಂದು ಹೇಳಿದ ಅವರು, ಮೇಯರ್ ಸಹ ಸಂಘದ ಆಶಯಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಂಬರೀಶ್, ದಿನೇಶ್ ಗುಂಡೂರಾವ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕಲಾವಿದ ದೊಡ್ಡಣ್ಣ, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಸೂರಪ್ಪಬಾಬು ಮತ್ತಿತರರು ಉಪಸ್ಥಿತರಿದ್ದರು.