ನವದೆಹಲಿ, ಮಾ.4- ಈಶಾನ್ಯ ರಾಜ್ಯದಲ್ಲಿ ಎಡರಂಗವನ್ನು ಛಿದ್ರಗೊಳಿಸಿ ಪ್ರಾಬಲ್ಯ ಸಾಧಿಸಿರುವ ಬಿಜೆಪಿಯ ನಾಗಾಲೋಟಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಕಡಿವಾಣ ಹಾಕಲು ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ.
ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ವರ್ಷ ಹಾಗೂ ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಹೊಸ ರಾಜ್ಯಗಳಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿರುವ ಬಿಜೆಪಿಗೆ ಲಗಾಮು ಹಾಕುವ ನಿಟ್ಟಿನಲ್ಲಿ ಮಹತ್ವದ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಸಜ್ಜಾಗಿದೆ.
ಈ ನಿಟ್ಟಿನಲ್ಲಿ ರಾಜಧಾನಿ ದೆಹಲಿಯಲ್ಲಿ ಮಾ.16ರಿಂದ 18ರ ವರೆಗೆ ಮಹಾಧಿವೇಶನ (ಪ್ಲೀನರಿ ಸೆಷನ್) ಆಯೋಜಿಸಿದೆ.
ಕೃಷಿ, ಉದ್ಯೋಗ ಮತ್ತು ಬಡತನ ನಿರ್ಮೂಲನೆಯಂತಹ ಮಹತ್ವದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಮಹತ್ವದ ನಿರ್ಣಯಗಳನ್ನು ಈ ಅಧಿವೇಶನದಲ್ಲಿ ಕೈಗೊಳ್ಳಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
2010ರಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲೂ ಸಹ ಆರ್ಥಿಕ ನಿರ್ಣಯದೊಂದಿಗೆ ಕೃಷಿ ಮತ್ತು ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಅಧಿವೇಶನದಲ್ಲೂ ಸಹ ಪ್ರಮುಖ ಕ್ಷೇತ್ರಗಳ ಬಗ್ಗೆ ನಿರ್ಣಯ ಕೈಗೊಂಡು ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ಬಲವರ್ಧನೆಗೊಳಿಸುವುದು ಮತ್ತು ಅದರ ಫಲಿತಾಂಶದ ಮೂಲಕ ಬಿಜೆಪಿಯ ಜನಪ್ರಿಯತೆಗೆ ತಡೆಯೊಡ್ಡುವುದು ಇದರ ಉದ್ದೇಶವಾಗಿದೆ.
ಕೃಷಿ, ಉದ್ಯೋಗ ಮತ್ತು ಬಡತನ ನಿರ್ಮೂಲನೆ ಕುರಿತು 9 ಸದಸ್ಯರ ಉಪ ಸಮೂಹವನ್ನು ಸಹ ಕಾಂಗ್ರೆಸ್ ರಚಿಸಿದೆ. ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ಸಿಂಗ್ ಹೂಡಾ ಇದರ ಅಧ್ಯಕ್ಷರಾಗಿದ್ದು, ಪಕ್ಷದ ನಾಯಕಿ ಮೀನಾಕ್ಷಿ ನಟರಾಜನ್ ಉಪಸಮೂಹದ ಸಂಚಾಲಕಿಯಾಗಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಪ್ರಸ್ತುತ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅನ್ನದಾತರ ಸಮಸ್ಯೆ ತೀವ್ರಗೊಂಡಿದ್ದು, ದುರಾವಸ್ಥೆ ತಲುಪಿದ್ದಾರೆ. ರೈತಾಪಿ ವರ್ಗದವರ ಬಾಳನ್ನು ಹಸನುಗೊಳಿಸಲು ಸಕ್ರಿಯ ಚಟುವಟಿಕೆಗಳನ್ನು ಪಕ್ಷವು ಕೈಗೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗುವ ಪ್ರತ್ಯೇಕ ನಿರ್ಣಯವೊಂದನ್ನು ಈ ಮಹಾಧಿವೇಶನದಲ್ಲಿ ಕೈಗೊಳ್ಳಲಾಗುವುದು ಎಂದು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಇಚ್ಛಿಸದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿ ಸೇರಿದಂತೆ ಕೆಲವು ಪ್ರಮುಖ ಪ್ರತ್ಯೇಕ ಗೊತ್ತುವಳಿಗಳನ್ನು ಸಹ ಈ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು ಎಂದು ಅವರು ಹೇಳಿದ್ದಾರೆ.
2001ರ ಕಾಂಗ್ರೆಸ್ ಮಹಾಧಿವೇಶನದಲ್ಲೂ ಸಹ ಇದೇ ರೀತಿಯ ಮಹತ್ವದ ನಿರ್ಣಯಗಳನ್ನು ಕೈಗೊಂಡು ಪಕ್ಷವು ತಕ್ಕಮಟ್ಟಿಗೆ ಯಶಸ್ಸು ಸಾಧಿಸಿತ್ತು.
ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ (2014) ಕೃಷಿ, ಉದ್ಯೋಗ ಮತ್ತು ಬಡತನ ಪ್ರಮಾಣ ಈಗಿನಷ್ಟು ಹದಗೆಟ್ಟಿರಲಿಲ್ಲ. ಇವುಗಳ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ನಾವು ಮಹಾಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ. ಅದು ಈ ಅಧಿವೇಶನದಲ್ಲೂ ಸಹ ಮುಂದುವರಿಯಲಿದೆ ಎಂದು ಅವರು ವಿವರಿಸಿದ್ದಾರೆ.
ನೋಟು ಅಮಾನೀಕರಣ ಮತ್ತು ಜಿಎಸ್ಟಿ ಜಾರಿಯಿಂದ ದೇಶದ ಜನರಿಗೆ ಉಂಟಾಗಿರುವ ಅನಾನುಕೂಲ ಮತ್ತು ಆರ್ಥಿಕ ಹಿನ್ನಡೆಗಳ ಬಗ್ಗೆಯೂ ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ದುರಾಡಳಿತವನ್ನು ಪಟ್ಟಿ ಮಾಡಿ ಅದನ್ನು ಜನರ ಬದಿಗೆ ಕೊಂಡೊಯ್ಯುವುದಾಗಿ ಅವರು ತಿಳಿಸಿದ್ದಾರೆ.