ನವದೆಹಲಿ, ಮಾ.4-ಯುವ ಜನತೆ ದೇಶದ ಶಕ್ತಿ ಎಂದು ಬಣ್ಣಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕ್ರಾಂತಿ ಯೋಗಿ ಬಸವಣ್ಣ ಮತ್ತು ವೀರಸನ್ಯಾಸಿ ವಿವೇಕಾನಂದರನ್ನು ಸ್ಮರಿಸಿದ್ದಾರೆ.
ತುಮಕೂರಿನಲ್ಲಿ ಇಂದು ನಡೆದ ಶ್ರೀರಾಮಕೃಷ್ಣ ಆಶ್ರಮದ ರಜತ ಮಹೋತ್ಸವ ಸಮಾರಂಭ ಮತ್ತು ರಾಜಮಟ್ಟದ ಯುವಜನ ಸಮ್ಮೇಳನದಲ್ಲಿ ದೆಹಲಿಯಿಂದ ವಿಡಿಯೋ ಕಾನ್ಸೆರೆನ್ಸ್ ಮೂಲಕ ಅವರು ಮಾತನಾಡಿದರು.
ತುಮಕೂರಿನ ಶ್ರೀಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಕುಮಾರ್ ಸ್ವಾಮಿಗಳಿಗೆ ಕನ್ನಡದಲ್ಲಿ ಪ್ರಣಾಮಗಳನ್ನು ಸಲ್ಲಿಸಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ಭಾಗವಹಿಸುವ ಆಸೆ ಇತ್ತು. ಆದರೆ, ನಾಳೆಯಿಂದ ಸಂಸತ್ ಅಧಿವೇಶನ ಇರುವ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಹೇಳಿದರು.
ವಿವೇಕಾನಂದ, ಬಸವಣ್ಣನವರಂಥ ಮಹಾ ಪುರುಷರು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹಾಗೆಯೇ ಸಿದ್ಧಗಂಗಾ ಶ್ರೀಗಳು ಸಹ ತ್ರಿವಿಧ ದಾಸೋಹದ ಮೂಲಕ ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಈ ಹಿಂದೆ ಅವರನ್ನು ಭೇಟಿ ಮಾಡಿ ಶ್ರೀಗಳೊಂದಿಗೆ ಕಳೆದ ಸಮಯವನ್ನು ಮರೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.