ಅಕ್ರಮ-ಅವ್ಯವಹಾರಗಳಲ್ಲಿ ಸಾರ್ವಜನಿಕ ವಲಯ ಬ್ಯಾಂಕುಗಳ ಉದ್ಯೋಗಿಗಳ ಶಾಮೀಲು

ಅಕ್ರಮ-ಅವ್ಯವಹಾರಗಳಲ್ಲಿ ಸಾರ್ವಜನಿಕ ವಲಯ ಬ್ಯಾಂಕುಗಳ ಉದ್ಯೋಗಿಗಳ ಶಾಮೀಲು
ಬೆಂಗಳೂರು, ಮಾ.3- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,723 ಕೋಟಿ ರೂ.ಗಳ ವಂಚನೆ ಹಗರಣದ ನಂತರ ಅಕ್ರಮ-ಅವ್ಯವಹಾರಗಳಲ್ಲಿ ಸಾರ್ವಜನಿಕ ವಲಯ ಬ್ಯಾಂಕುಗಳ (ಪಿಎಸ್‍ಬಿಗಳು) ಉದ್ಯೋಗಿಗಳ ಶಾಮೀಲಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಿಬ್ಬಂದಿಯಿಂದಲೇ ಬ್ಯಾಂಕ್‍ಗಳಿಗೆ 2,450 ಕೋಟಿ ರೂ.ಗಳ ವಂಚನೆ ಮತ್ತು ನಷ್ಟವಾಗಿರುವ ಸಂಗತಿಯೂ ಇದೀಗ ಬಹಿರಂಗಗೊಂಡಿದೆ.
ದೇಶದ ವಿವಿಧ ರಾಜ್ಯಗಳಲ್ಲಿ 2013ರ ಏಪ್ರಿಲ್‍ನಿಂದ ಜೂನ್ 2016ರವರೆಗೆ ಬ್ಯಾಂಕ್ ಉದ್ಯೋಗಿಗಳಿಂದ 1,232 ವಂಚನೆ ಪ್ರಕರಣಗಳು ನಡೆದಿದ್ದು, ಒಟ್ಟು 2,450 ಕೋಟಿ ರೂ.ಗಳ ವಂಚನೆ ಅಥವಾ ನಷ್ಟವಾಗಿದೆ ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ (ಆರ್‍ಬಿಐ) ಲಭ್ಯವಾದ ಅಂಕಿ-ಅಂಶ ಮಾಹಿತಿಗಳು ತಿಳಿಸಿವೆ.
ದೇಶದ ರಾಜ್ಯವಾರು ನಡೆದ ವಂಚನೆ ಪ್ರಕರಣಗಳು ಮತ್ತು ನಷ್ಟದ ವಿವರಗಳನ್ನು ಆರ್‍ಬಿಐ ವರ್ಗೀಕರಿಸಬೇಕಿದೆ. ಆದರೆ ಲಭ್ಯವಿರುವ ಮಾಹಿತಿ ಪ್ರಕಾರ ಒಟ್ಟು ಪ್ರಕರಣಗಳಲ್ಲಿ ಮಹಾರಾಷ್ಟ್ರ ಶೇ.49ರಷ್ಟು (609 ಪ್ರಕರಣಗಳು) ವಂಚನೆಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ರಾಜಸ್ತಾನ ಶೇ.4ರಷ್ಟು (38) ಪ್ರಕರಣಗಳೊಂದಿಗೆ ಕೊನೆ ಸ್ಥಾನದಲ್ಲಿದೆ.
ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬ್ಯಾಂಕ್ ನೌಕರರು ವಂಚನೆಯಲ್ಲಿ ಶಾಮೀಲಾಗಿದ್ದಾರೆ. ಬ್ಯಾಂಕ್ ನೌಕರರು 1 ಲಕ್ಷ ರೂ.ಗಳು ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ವಂಚನೆ ಪ್ರಕರಣಗಳಲ್ಲಿ ಶಾಮೀಲಾಗಿರುವ ಪ್ರಕರಣಗಳನ್ನು ವಿಶೇಷವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಸಣ್ಣಪುಟ್ಟ ವಂಚನೆ ಪ್ರಕರಣಗಳು ಅನೇಕ ಸಂದರ್ಭದಲ್ಲಿ ಬೆಳಕಿಗೆ ಬಂದಿಲ್ಲ.
2016ರ ನಂತರ ಬ್ಯಾಂಕ್‍ಗಳಿಗೆ ವಂಚನೆಗಳ ಪ್ರಕರಣಗಳು ಹಾಗೂ ಅಕ್ರಮ-ಅವ್ಯವಹಾರಗಳು ಗಣನೀಯವಾಗಿ ಹೆಚ್ಚಾಗಿದ್ದು, ಇವುಗಳಲ್ಲೂ ಉದ್ಯೋಗಿಗಳು ಮತ್ತು ಸಿಬ್ಬಂದಿಗಳು ಶಾಮೀಲಾಗಿದ್ದಾರೆ. ಈ ಅವಧಿಯಲ್ಲಿನ ಪ್ರಕರಣಗಳ ಬಗ್ಗೆ ಆರ್‍ಬಿಐ ಸದ್ಯದಲ್ಲೇ ಮತ್ತಷ್ಟು ಮಾಹಿತಿಯನ್ನು ಬಹಿರಂಗಗೊಳಿಸುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ