ಕೆಲವರಿಗೆ ವಿಶೇಷವಾದ ಮೂಗುಗಳಿದ್ದು ಅವರಿಗೆ ಲಂಚದಂತಹ ವಾಸನೆಗಳ ಬಗ್ಗೆ ಹೆಚ್ಚಿನ ಅರಿವಿದೆ: ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಕೆಲವರಿಗೆ ವಿಶೇಷವಾದ ಮೂಗುಗಳಿದ್ದು ಅವರಿಗೆ ಲಂಚದಂತಹ ವಾಸನೆಗಳ ಬಗ್ಗೆ ಹೆಚ್ಚಿನ ಅರಿವಿದೆ: ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ
ಬೆಂಗಳೂರು, ಮಾ.3-ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡರೂ ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲಂಚದ ವಾಸನೆ ಹಿಡಿಯುವುದು ಕೆಲವರಿಗೆ ರಕ್ತಗತವಾಗಿದೆ. ಏಕೆಂದರೆ ಅವರ ಮೂಗಿಗೆ ಲಂಚದ ಬಗ್ಗೆ ಹೆಚ್ಚಿನ ಅರಿವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ಕರ್ನಾಟಕ ನವನಿರ್ಮಾಣ ವಿಷನ್ 20-25 ಕಿರುಹೊತ್ತಿಗೆ ಬಿಡುಗಡೆ ಮಾಡಿ ಇದರ ಕುರಿತ ವಿಚಾರ ಮಂಥನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಪಕ್ಷಗಳ ಹೆಸರು ಪ್ರಸ್ತಾಪಿಸದೆ ಕೆಲವರಿಗೆ ವಿಶೇಷ ವಾಸನೆ ಹಿಡಿಯುವ ಮೂಗುಗಳಿವೆ. ಅವರಿಗೆ ಲಂಚದಂತಹ ವಾಸನೆಗಳು ಬೇಗ ಅರ್ಥವಾಗುತ್ತವೆ. ಹಾಗಾಗಿ ನಾವು ಯಾವುದೇ ಅಭಿವೃದ್ಧಿ ಕೆಲಸ ಮಾಡಿದರೂ ಅದರಲ್ಲಿ ಲಂಚ ಪಡೆಯಲಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರು.
ಬೆಂಗಳೂರನ್ನು ಕಸದ ನಗರಿಯನ್ನಾಗಿ ಮಾಡಿದವರೇ ಇಂದು ಬೆಂಗಳೂರು ರಕ್ಷಿಸಿ ಎಂದು ಪಾದಯಾತ್ರೆ ಹೊರಟಿದ್ದಾರೆ. ಇದರಿಂದ ಜನ ಗೊಂದಲಕ್ಕೆ ಸಿಲುಕಿದ್ದಾರೆ. ಜನಸಾಮಾನ್ಯರು ಮತ್ತೆ ರಾಜಕಾರಣಿಗಳನ್ನು ನಂಬುವುದಿಲ್ಲ. ಹೀಗಿದ್ದಾಗ ಇವರು ಸುಳ್ಳು ಆರೋಪಗಳನ್ನು ಮುಂದಿಟ್ಟು ಪಾದಯಾತ್ರೆ ಮಾಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸರ್ಕಾರ ಮತ್ತೆ ಮರಳಿ ಅಧಿಕಾರಕ್ಕೆ ಬರಲಿದೆ. ಕಳೆದ ಐದು ವರ್ಷದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. 1994 ರಿಂದಲೂ ಹಣಕಾಸು ಸಚಿವನಾಗಿದ್ದೇನೆ. ರಾಮಕೃಷ್ಣಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಎಚ್.ಡಿ.ದೇವೇಗೌಡ, ಧರ್ಮಸಿಂಗ್ ಸೇರಿ ಐದು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ನನ್ನ ಅನುಭವದಲ್ಲಿ ಯಾವ ರಾಜಕೀಯ ಪಕ್ಷಗಳು, ಯಾವ ಸರ್ಕಾರಗಳು ಪ್ರಣಾಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ನಾನು ಪ್ರಣಾಳಿಕೆಯನ್ನು ಗಂಭೀರವಾಗಿಟ್ಟು ಕೊಂಡು ಯೋಜನೆ ರೂಪಿಸಿದ್ದೇನೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ ಒಂದೆರಡು ಹೊರತುಪಡಿಸಿ ಉಳಿದೆಲ್ಲ ಭರವಸೆ ಈಡೇರಿಸಿದ್ದೇವೆ. ಈಗ ರಾಜ್ಯದ ಸಮಗ್ರ ಅಭಿವೃದ್ಧಿಗೆ ವಿಷನ್ 20-25 ತಯಾರಿಸಲಾಗಿದೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುವ ವಿಶ್ವಾಸವಿರುವುದರಿಂದ ಈ ದೂರದೃಷ್ಠಿ ಯೋಜನೆಗಳನ್ನು ನಾವೇ ಜಾರಿಗೆ ತರುತ್ತೇವೆ ಎಂದು ಹೇಳಿದರು.
ರೇಣುಕಾ ಚಿದಂಬರಂ ಅವರ ನೇತೃತ್ವದಲ್ಲಿ ಸಮಿತಿ ಮಾಡಿ ವಿಷನ್ 20-25 ರೂಪಿಸಲು ಸೂಚಿಸಲಾಗಿತ್ತು. ಅವರು ಮೂರು ತಿಂಗಳ ಕಾಲಾವಕಾಶವಿದ್ದರೂ ಒಂದೇ ತಿಂಗಳಲ್ಲಿ ವರದಿ ನೀಡಿದ್ದಾರೆ. ರಾಜ್ಯದ 30 ಜಿಲ್ಲೆಗಳಲ್ಲೂ ಶ್ರಮಿಕರು, ಕೂಲಿಕಾರ್ಮಿಕರು, ಕೃಷಿಕರು, ಉದ್ಯಮಿಗಳು ಸೇರಿ ನಾನಾ ವರ್ಗದವರ ಜೊತೆ ಚರ್ಚೆ ಮಾಡಿ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಒಟ್ಟು 13 ವಲಯಗಳನ್ನು ಗುರುತಿಸಿದ್ದು, ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ. ಈ ಮಾರ್ಗಸೂಚಿಗಳೇ ಅಂತಿಮವಲ್ಲ. ಇಂದು ನಡೆದ ವಿಚಾರ ಮಂಥನದಲ್ಲಿ ಕೇಳಿ ಬರುವ ಅಭಿಪ್ರಾಯಗಳನ್ನೂ ಮತ್ತು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯ ಕ್ರೋಢೀಕರಿಸಿ ಇನ್ನಷ್ಟು ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಹಸಿವು ಮುಕ್ತ ಕರ್ನಾಟಕ ಮಾಡಿದೆ. ನನ್ನ ಬಾಲ್ಯ ಜೀವನದಲ್ಲಿ ಹಿಡಿ ಅನ್ನಕ್ಕಾಗಿ ಬೇರೆಯವರ ಮನೆಯ ಮುಂದೆ ನಿಲ್ಲುತ್ತಿದ್ದ ಬಡವರನ್ನು ನೋಡಿದ್ದೆ. ನೀರಾವರಿ ಜಮೀನು ಹೊಂದಿದ್ದವರು ಮಾತ್ರ ಭತ್ತ ಬೆಳೆಯುತ್ತಿದ್ದರು, ಒಣ ಭೂಮಿ ಬೇಸಾಯ ಮಾಡುವವರ ಮನೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮಾತ್ರ ಅನ್ನ ಮಾಡಲಾಗುತ್ತಿತ್ತು. ಚಿಕ್ಕಮಕ್ಕಳಿಗೆ ಜ್ವರ ಬಂದಾಗ ರಾಗಿ, ಜೋಳದ ರೊಟ್ಟಿ ತಿನ್ನಿಸಲಾಗದೆ ಹಿಡಿ ಅನ್ನಕ್ಕಾಗಿ ಭತ್ತ ಬೆಳೆಯುವವರ ಮನೆ ಮುಂದೆ ಕಾಯುತ್ತಾ ನಿಲ್ಲುತ್ತಿದ್ದರು. ಅಂತಹ ಸ್ಥಿತಿ ಮುಂದೆ ಯಾರಿಗೂ ಬರಬಾರದು ಎಂಬ ಕಾರಣಕ್ಕಾಗಿ ನಾನು ಮುಖ್ಯಮಂತ್ರಿಯಾದ ನಂತರ ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ ಎಂದರು. ಕೇಂದ್ರದ ಯುಪಿಎ ಸರ್ಕಾರ ಆಹಾರಭದ್ರತೆ ಕಾಯ್ದೆಯಡಿ ಪ್ರತಿ ಕುಟುಂಬಕ್ಕೆ ಕೆಜಿಗೆ 3 ರೂ.ಗಳಂತೆ ಅಕ್ಕಿ ನೀಡುವ ಯೋಜನೆ ಜಾರಿಗೆ ಘೋಷಿಸಿತ್ತು. ಆದರೆ ನಮ್ಮ ಸರ್ಕಾರ ಸಂಪೂರ್ಣ ಉಚಿತವಾಗಿ ಅಕ್ಕಿ ನೀಡುತ್ತಿದೆ. ಇತ್ತೀಚೆಗೆ ಅದನ್ನು ಪ್ರತಿ ವ್ಯಕ್ತಿಗೆ 7 ಕೆಜಿಗೆ ಹೆಚ್ಚಿಸಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ವಲಯದಲ್ಲಿ 1.5 ಲಕ್ಷ, ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗಗಳನ್ನು ನೀಡಲಾಗಿದೆ. ಕರ್ನಾಟಕ ಬಂಡವಾಳ ಹೂಡಿಕೆಯಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಕೈಗಾರಿಕೆಗೆ ಪೂರಕವಾದ ಕೌಶಲ್ಯ ತರಬೇತಿ ನೀಡಲು 5ಲಕ್ಷ ಯುವಕರಿಗೆ ಪ್ರತ್ಯೇಕ ಕೌಶಲ್ಯ ತರಬೇತಿ ಕೇಂದ್ರ ತೆರೆಯಲಾಗಿದೆ.
ಬಿಪಿಎಲ್ ಕುಟುಂಬಕ್ಕೆ ಶೇ.30 ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಕರ್ನಾಟಕ ಯೋಜನೆ ಘೋಷಿಸಲಾಗಿದೆ. ಕೃಷಿ ಹೊಂಡಗಳ ಮೂಲಕ ನೀರು ಅಲ್ಲಲ್ಲೇ ಸಂಗ್ರಹಿಸಿ ಅಂತರ್ಜಲ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ದಲಿತರಿಗೆ ಉಪಯೋಜನೆಯಡಿ ಜನಸಂಖ್ಯೆಗನುಗುಣವಾಗಿ ಅನುದಾನ ಮೀಸಲಿಡಲಾಗಿದೆ. 10 ಕೋಟಿ ಯವರೆಗೂ ಸರ್ಕಾರದ ಭದ್ರತೆಯಲ್ಲಿ ಸಾಲ ನೀಡಲಾಗುತ್ತಿದೆ. ಮೂಲಸೌಕರ್ಯಾಭಿವೃದ್ಧಿಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅದು ಫಲ ನೀಡಲಿದೆ. 2023 ರ ವೇಳೆಗೆ 220 ಕಿ.ಮೀ. ಮೆಟ್ರೋ ರೈಲು ಮಾರ್ಗ ಅಭಿವೃದ್ಧಿಯಾಗಲಿದೆ. ಪಾವಗಡದಲ್ಲಿ 2000 ಮೆಗಾ ವ್ಯಾಟ್ ಸೌರಶಕ್ತಿ ಘಟಕ ಸ್ಥಾಪಿಸಲಾಗಿದೆ. ನೀರಾವರಿಗೆ 58 ಸಾವಿರ ಕೋಟಿ ಖರ್ಚು ಮಾಡಿದ್ದು, ಇನ್ನೂ ಒಂದು ಲಕ್ಷ ಕೋಟಿ ಖರ್ಚು ಮಾಡಬೇಕಿದೆ ಎಂದರು.
ಬಹಳಷ್ಟು ವಿಷಯಗಳಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಸರ್ವರನ್ನೂ ಒಳಗೊಂಡ ಸಮಪಾಲು ಸಮಬಾಳು ತತ್ವದಡಿ ನಮ್ಮ ಸರ್ಕಾರ ನಡೆದುಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಯ ವಿಷನ್ 20-25 ಬಿಡುಗಡೆ ಮಾಡಿದ ನಂತರ ಇದರ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನ ಪಡೆದ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳ ಜೊತೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.
ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳ ಬೆನ್ನು ತಟ್ಟಿ ಪೆÇ್ರೀ
ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಜಯರಾಮ್‍ರಮೇಶ್, ರಾಜ್ಯ ಸಚಿವರಾದ ಟಿ.ಬಿ.ಜಯಚಂದ್ರ, ಕೆ.ಜೆ.ಜಾರ್ಜ್, ಬಸವರಾಜರಾಯರೆಡ್ಡಿ, ಎಚ್.ಆಂಜನೇಯ, ಆರ್.ಬಿ.ತಿಮ್ಮಾಪುರ್, ವಿನಯ್‍ಕುಲಕರ್ಣಿ, ಕೃಷ್ಣಭೆರೇಗೌಡ, ರಾಜ್ಯಸಭಾ ಸದಸ್ಯ ರಾಜುಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ