ಈಶಾನ್ಯ ರಾಜ್ಯದ ಫಲಿತಾಂಶಗಳು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಯ್ಯ

ಈಶಾನ್ಯ ರಾಜ್ಯದ ಫಲಿತಾಂಶಗಳು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಯ್ಯ
ಬೆಂಗಳೂರು, ಮಾ.3-ಯಾವುದೇ ರಾಜ್ಯದ ಫಲಿತಾಂಶಗಳು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಹೇಳಿದ್ದಾರೆ.
ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯದಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಮೂರೂ ರಾಜ್ಯಗಳಷ್ಟೇ ಅಲ್ಲ, ಯಾವುದೇ ರಾಜ್ಯಗಳ ಚುನಾವಣೆ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಏನಾದರೂ ಫಲಿತಾಂಶ ಬರಲಿ. ಇಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳು, ಬಿಜೆಪಿಯ ಭ್ರಷ್ಟಚಾರದಿಂದ ಕರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುವುದು ಎಂದು ಹೇಳಿದರು.
ಇನ್ನೊಂದೆಡೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ಈಗಾಗಲೇ ನಾಗಮೋಹನ್‍ದಾಸ್ ನೇತೃತ್ವದ ಸಮಿತಿ ವರದಿ ನೀಡಿದೆ. ವರದಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಅದನ್ನು ನೋಡಿದ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ವಿದ್ಯುತ್ ಕಂಪೆನಿಗಳ ಸಿಬ್ಬಂದಿ ಮತ್ತು ನೌಕರರ ವೇತನ ಹೆಚ್ಚಳಕ್ಕೆ ಕೆಪಿಟಿಸಿಎಲ್ ಮತ್ತು ವಿದ್ಯುತ್ ವಿತರಣಾ ಕಂಪೆನಿಗಳ ನಡುವೆ ಒಪ್ಪಂದ
ಬೆಂಗಳೂರು, ಮಾ.3-ಇಂಧನ ಇಲಾಖೆಯ ಸಿಬ್ಬಂದಿ ವರ್ಗಕ್ಕೆ ಶೇ.26ರಷ್ಟು ವೇತನ ಹೆಚ್ಚಳ ಮಾಡುವ ಒಪ್ಪಂದಕ್ಕೆ ಕೆಪಿಟಿಸಿಎಲ್ ಮತ್ತು ವಿದ್ಯುತ್ ವಿತರಣಾ ಕಂಪೆನಿಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.
ನಂತರ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಎಲ್ಲಾ ವಿದ್ಯುತ್ ಕಂಪೆನಿಗಳ ಸಿಬ್ಬಂದಿ ಮತ್ತು ನೌಕರರ ವೇತನವನ್ನು ಶೇ.38ರಷ್ಟು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ ಎಸ್ಕಾಂಗಳ ಮೇಲಿನ ಹೊರೆ ಹೆಚ್ಚಾಗಬಾರದು ಎಂಬ ದೃಷ್ಟಿಯಿಂದ ಶೇ.26ರಷ್ಟು ವೇತನ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಕನಿಷ್ಠ ವೇತನ 12,991 ರೂ. ನಿಂದ 16,370 ರೂ.ಗಳಿಗೆ ಏರಿಕೆಯಾಗುತ್ತದೆ. ಅದೇ ರೀತಿ ಗರಿಷ್ಠ ವೇತನ 96,700 ರೂ.ಗಳಿಂದ 1,22,000 ರೂ.ಗಳವರೆಗೆ ಹೆಚ್ಚಳವಾಗಲಿದೆ. ಅದೇ ರೀತಿ ನೌಕರರ ಕುಟುಂಬದವರ ಪಿಂಚಣಿ ಕನಿಷ್ಠ 4 ಸಾವಿರದಿಂದ 8,185 ರೂ.ಗಳಿಗೆ , ಗರಿಷ್ಠ 39 ಸಾವಿರದಿಂದ 61 ಸಾವಿರ ರೂ.ಗಳವರೆಗೆ ಏರಿಕೆಯಾಗುತ್ತದೆ. 2017-18ನೇ ಸಾಲಿನಲ್ಲಿ ವೇತನ ಹೆಚ್ಚಳದಿಂದ ಎಸ್ಕಾಂಗೆ 604 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಪಿಂಚಣಿ ಹೆಚ್ಚಳದಿಂದ 240 ಕೋಟಿ ರೂ. ಹೊರೆಯಾಗುತ್ತದೆ ಎಂದು ಹೇಳಿದರು.
ಪ್ರತಿ ವಿದ್ಯುತ್ ಘಟಕದ ದಾಖಲಾತಿಗಳನ್ನು ವಿಡಿಯೋ ದಾಖಲೆ ಮಾಡುವುದು, ಸಾಮಗ್ರಿಗಳ ಆಡಿಟ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಖಾಲಿ ಇರುವ ಹುದ್ದೆಗಳನ್ನು ರಾಜ್ಯಸರ್ಕಾರದ ನೌಕರರ ನೇಮಕಾತಿ ಮಾದರಿಯಲ್ಲೇ ಪಾರದರ್ಶಕವಾಗಿ ನೇಮಕ ಮಾಡಲಾಗುತ್ತಿದೆ. ಕನ್ನಡ ಪರೀಕ್ಷೆ ತೇರ್ಗಡೆಯಾದ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ದೊರೆಯುತ್ತದೆ. ಆಯಾ ಕಂಪೆನಿಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೇಮಕಾತಿ ವಿಚಾರದಲ್ಲಿ ನೀಡಲಾಗಿದೆ ಎಂದು ಹೇಳಿದರು.
ವೇತನ ಪರಿಷ್ಕರಣೆಯಿಂದಾಗುವ ಹೊರೆಯನ್ನು ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಗಮನಕ್ಕೆ ತರಲಾಗುತ್ತದೆ. ಆಯೋಗ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆ ಖಾಯಂಗೊಳಿಸುವ ನಿಟ್ಟಿನಲ್ಲಿ ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್ ಸುಳ್ಳಿನ ಕಂತೆಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ