ಬಿಜೆಪಿ ಗೆಲುವುಗೆ ಪ್ರಧಾನಿ ಅಭಿನಂದನೆ

 

ನವದೆಹಲಿ:ಮಾ-3: ತ್ರಿಪುರಾ,ನಾಗಾಲ್ಯಾಂಡ್ ಹಾಗೂ ಮೆಘಾಲಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಉತ್ತಮ ಆಡಳಿತದ ಕಾರ್ಯಸೂಚಿಗೆ ಬೆಂಬಲಿಸಿದ  ಜನರಿಗೆ ಅಭಿನಂದನೆಗಳು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ತ್ರಿಪುರದಲ್ಲಿನ ಐತಿಹಾಸಿಕ ಗೆಲುವು ಅತ್ಯಂತ ಸೈದ್ಧಾಂತಿಕವಾದದ್ದು. ಇದು ವಿವೇಚನಾರಹಿತ ಶಕ್ತಿ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು ಎಂದಿದ್ದಾರೆ.

 

ಈ ಕುರಿತು ಟ್ವೀಟ್‌ ಮಾಡಿರುವ ನರೇಂದ್ರ ಮೋದಿ, ‘ಈಶಾನ್ಯ ರಾಜ್ಯದ ಜನರ ಕನಸುಗಳು ಮತ್ತು ಆಕಾಂಕ್ಷೆಯನ್ನು ಈಡೇರಿಸಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದ್ದಾರೆ. 2018ರ ತ್ರಿಪುರಾ ಚುನಾವಣೆಯನ್ನು ಒಂದು ಯುಗವಾಗಿ ಪರಿಗಣಿಸಲಾಗುವುದು! ಎಂದಿರುವ ಅವರು, ತ್ರಿಪುರದ ನನ್ನ ಸಹೋದರಿಯರು ಮತ್ತು ಸಹೋದರರು ಮಾಡಿರುವ ಸಾಧನೆ ಅಸಾಮಾನ್ಯವಾಗಿದೆ. ಬಿಜೆಪಿಗೆ ನೀಡಿರುವ ಅಸಾಧಾರಣ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಯಾವುದೇ ಪದಗಳಿಲ್ಲ. ತ್ರಿಪುರಾವನ್ನು ಪರಿವರ್ತಿಸುವಲ್ಲಿ ಇದೊಂದು ಮೈಲಿಗಲ್ಲು ಎಂದಿದ್ದಾರೆ.

 

ತ್ರಿಪುರದಲ್ಲಿನ ಐತಿಹಾಸಿಕ ಗೆಲುವು ಅತ್ಯಂತ ಸೈದ್ಧಾಂತಿಕವಾದದ್ದು. ಇದು ವಿವೇಚನಾರಹಿತ ಶಕ್ತಿ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು. ಇಂದು ಶಾಂತಿ ಮತ್ತು ಅಹಿಂಸೆಯು ಭಯದ ವಾತಾವರಣದ ವಿರುದ್ಧ ಮೇಲುಗೈ ಸಾಧಿಸಿದೆ. ತ್ರಿಪುರಾದಲ್ಲಿ ಉತ್ತಮ ರಾಜ್ಯ ಸರ್ಕಾರವನ್ನು ನಾವು ನೀಡುತ್ತೇವೆ ಎಂದು ಮೋದಿ ಭವರಸೆ ನೀಡಿದ್ದಾರೆ.

 

ಮೇಘಾಲಯ, ನಾಗಾಲ್ಯಾಂಡ್, ಮತ್ತು ತ್ರಿಪುರಾ ಜನರು ಮಾತನಾಡುತ್ತಾರೆ! ಎಂದಿರುವ ಅವರು, ಉತ್ತಮ ಆಡಳಿತ ಕಾರ್ಯಸೂಚಿ ಹಾಗೂ ‘ಆಕ್ಟ್‌ ಈಸ್ಟ್ ಪಾಲಿಸಿ’ಯನ್ನು ಹೊಂದಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಬೆಂಬಲಿಸಿದ್ದಕ್ಕಾಗಿ ಹಾಗೂ ಉತ್ತಮ ಆಡಳಿತ ಸಿದ್ಧಾಂತ ಬೆಂಬಲಿಸಿದ ಮೂರು ರಾಜ್ಯಗಳ ಜನರಿಗೆ ಧನ್ಯವಾದ ಹೇಳುತ್ತೇನೆ. ಜನರ ಕನಸು ಮತ್ತು ಆಕಾಂಕ್ಷೆಗಳನ್ನು ನೆರವೇರಿಸುವಲ್ಲಿ ನಾವು ಶ್ರಮಿಸುತ್ತೇವೆ ಎಂದು ಪ್ರಧಾನಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

 

59 ಸ್ಥಾನಗಳ ಪೈಕಿ ಬಿಜೆಪಿ 43 ಸ್ಥಾನಗಳನ್ನು ಜಯಿಸುವ ಮೂಲಕ ಭರ್ಜರಿ ಬಹುಮತ ಪಡೆದಿದೆ. ಆಡಳಿತದಲ್ಲಿದ್ದ ಎಡಪಕ್ಷ 16 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡರೆ ಕಾಂಗ್ರೆಸ್‌ನದ್ದು ಶೂನ್ಯ ಸಂಪಾದನೆ. 2013 ರಲ್ಲಿ ಎಡಪಕ್ಷಗಳ ಮೈತ್ರಿಕೂಟ 49 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್‌ 10 ಸ್ಥಾನಗಳನ್ನು ಗೆದ್ದಿತ್ತು.

 

ತ್ರಿಪುರದಲ್ಲಿ ಕಳೆದ ಎರಡು ದಶಕಗಳಿಂದ ಅಧಿಕಾರದಲ್ಲಿರುವ ಸಿಪಿಎಂ-ನೇತೃತ್ವದ ಸರಕಾರ ಧೂಳಿಪಟವಾಗಿದೆ. ತ್ರಿಪುರದಲ್ಲಿ ಸರಕಾರ ರಚಿಸಲಿರುವ ಬಿಜೆಪಿ, ನಾಗಾಲ್ಯಾಂಡ್‌ ಮತ್ತು ಮೇಘಾಲಯದಲ್ಲೂ ಸರಕಾರ ರಚಿಸುವ ಸಾಧ್ಯತೆಗಳಿವೆ. ತ್ರಿಪುರದಲ್ಲಿ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮಾಣಿಕ್‌ ಸರ್ಕಾರ ಅವರ ಕನಸು ಭಗ್ನವಾಗಿದ್ದು, ಈ ಮೂಲಕ ಎಡ ಪಕ್ಷಕ್ಕೆ ಭಾರೀ ಹೊಡೆತಬಿದ್ದಿದೆ. ನಾಗಾಲ್ಯಾಂಡ್‌ನ‌ಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾಗಿರುವ ಎನ್‌ಡಿಪಿಪಿ ಮುಂದಿದ್ದು, ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಒಂದು ಕಾಲದಲ್ಲಿ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿದ್ದ  ಮೇಘಾಲಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ಏರ್ಪಟ್ಟಿದೆ. ಒಟ್ಟಾರೆ ಬಿಜೆಪಿ ಅಲೆ ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ನಲ್ಲಿ ಪ್ರಬಲವಾಗಿ ಬೀಸಿದೆ.

 

ತ್ರಿಪುರ 59/59 :  ಬಿಜೆಪಿ+ 43, ಕಾಂಗ್ರೆಸ್‌ 0, ಸಿಪಿಎಂ 16, ಸಿಪಿಐ 0, ಇತರರು 0.

 

ನಾಗಾಲ್ಯಾಂಡ್‌ 60/60 : ಬಿಜೆಪಿ + 29, ಕಾಂಗ್ರೆಸ್‌ 0, ಎನ್‌ಪಿಎಫ್ 25, ಎನ್‌ಸಿಪಿ 0, ಇತರರು 6

 

ಮೇಘಾಲಯ : 59/59 : ಬಿಜೆಪಿ 2, ಕಾಂಗ್ರೆಸ್‌ 21, ಯುಡಿಪಿ 6, ಎನ್‌ಪಿಪಿ 19, ಇತರರು 11.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ