ಬೆಂಗಳೂರು, ಮಾ.2- ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿನ ಪ್ರತಿ ಇಬ್ಬರು ಮಹಿಳಾ ಪೌರ ಕಾರ್ಮಿಕರಿಗೆ ಈ ವರ್ಷ ವಿದೇಶ ಪ್ರವಾಸ ಭಾಗ್ಯ ಕಲ್ಪಿಸಲಾಗುವುದು ಎಂದು ಮೇಯರ್ ಸಂಪತ್ರಾಜ್ ಪಾಲಿಕೆ ಸಭೆಯಲ್ಲಿಂದು ತಿಳಿಸಿದರು.
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಶಿವರಾಜ್ ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿದ ಮೇಯರ್, ತಮ್ಮ ಆಡಳಿತದಲ್ಲಿ ಮಹಿಳಾ ಸದಸ್ಯರು ಹಾಗೂ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ವಿದೇಶದಲ್ಲಿ ಕಸ ವಿಲೇವಾರಿ ಬಗ್ಗೆ ಅಧ್ಯಯನ ನಡೆಸಲು ಪ್ರತಿ ವಲಯದ ಇಬ್ಬರು ಮಹಿಳಾ ಪೌರ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಅದೇ ರೀತಿ ಬಿಬಿಎಂಪಿ ಆವರಣದಲ್ಲಿ ಅತ್ಯಾಧುನಿಕ ಮಾಧ್ಯಮ ಕೇಂದ್ರ ಮತ್ತು ಮೇಯರ್ ಹಾಗೂ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗಾಗಿ ವೈಟಿಂಗ್ ರೂಮ್ ನಿರ್ಮಾಣಕ್ಕೂ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.