ನವದೆಹಲಿ, ಮಾ.2-ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರೀಯ ತನಿಖಾ ದಳ-ಸಿಬಿಐ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಅತಿ ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಈ ಬೆಳವಣಿಗೆಯಿಂದಾಗಿ ಚಿದು ಅವರ ಕೊರಳಿಗೂ ಈ ಪ್ರಕರಣ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ಚಿದಂಬರಂ ಪುತ್ರ ಮತ್ತು ಉದ್ಯಮಿ ಕಾರ್ತಿ ಚಿದಂಬರಂ ಅವರನ್ನು ದೆಹಲಿ ನ್ಯಾಯಾಲಯವೊಂದು ಮಾ.6ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಚಿದಂಬರಂ ಅವರನ್ನೂ ಪ್ರಶ್ನೆಗೆ ಒಳಪಡಿಸುವ ನಿರೀಕ್ಷೆ ಇದ್ದು, ಮುಂದಿನ ಬೆಳವಣಿಗೆ ಕುತೂಹಲ ಕೆರಳಿಸಿದೆ.
ಪಿ.ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಈ ಹಗರಣ ನಡೆದಿದ್ದು, ಲಂಚ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಕುರಿತು ಅವರನ್ನು ಕೇಂದ್ರೀಯ ತನಿಖಾ ದಳ ವಿಚಾರಣೆಗೆ ಒಳಪಡಿಸಲಿದೆ ಎಂದು ಮೂಲಗಳು ಹೇಳಿವೆ.
ಚಿಂತೆ ಬೇಡ, ನಾನಿದ್ದೇನೆ..
ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಸಂವಾದದಲ್ಲಿ ಭಾಗವಹಿಸಿಲು ಲಂಡನ್ಗೆ ತೆರಳಿದ್ದ ಚಿದಂಬರಂ, ಮಗ ಕಾರ್ತಿ ಬಂಧನದ ಸುದ್ದಿ ತಿಳಿಯುತ್ತಲೇ ತಮ್ಮ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಭಾರತಕ್ಕೆ ಧಾವಿಸಿದ್ದಾರೆ.
ಬಂಧನದ ಬಳಿಕ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ಮಗನನ್ನು ಭೇಟಿ ಮಾಡಿದ ಚಿದಂಬರಂ ಮತ್ತು ಅವರ ಪತ್ನಿ ನಳಿನಿ ಚಿದಂಬರಂ ಚಿಂತೆ ಬೇಡ.. ನಾನಿದ್ದೇನೆ.. ಎಂದು ಅಭಯ ನೀಡಿ ಸಮಾಧಾನಪಡಿಸಿದ್ದಾರೆ.
ಸಿಬಿಐ ನ್ಯಾಯಾಧೀಶ ಸುನಿಲ್ ರಾಣಾ ಅವರ ಮುಂದೆ ಸುಮಾರು ಮೂರು ತಾಸುಗಳಿಗೂ ಹೆಚ್ಚು ಕಾಲ ನಡೆದ ವಾದ-ಪ್ರತಿವಾದಗಳ ಸಂದರ್ಭದಲ್ಲಿ ವಕೀಲರಾದ ಚಿದು ಮತ್ತು ನಳಿನಿ ದಂಪತಿ ಹಾಜರಿದ್ದು, ಕೋರ್ಟ್ ಕಲಾಪವನ್ನು ಗಮನಿಸಿದ್ದರು.