ಮೈಸೂರು, ಮಾ.2- ಮೊದಲು ಬೆಂಗಳೂರನ್ನು ಹಾಳು ಮಾಡಿದ್ದೇ ಬಿಜೆಪಿಯವರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಂಗಳೂರನ್ನು ಹಾಳು ಮಾಡಿದ್ದೇ ಬಿಜೆಪಿಯವರು. ಈಗ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.
ಬೆಂಗಳೂರು ಮತ್ತು ಮೈಸೂರು ಏನಾದರು ಅಭಿವೃದ್ಧಿಯಾಗಿದೆ ಎಂದರೆ ಅದು ನಮ್ಮಿಂದ ಮಾತ್ರ. ಅಭಿವೃದ್ಧಿ ಹೆಸರಿನಲ್ಲಿ ನಿಮ್ಮ ಪ್ಯಾಕೇಟ್ ಅನ್ನು ತುಂಬಿಸಿಕೊಳ್ಳುತ್ತಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮೈಸೂರು ಅಲ್ಪ-ಸ್ವಲ್ಪ ಅಭಿವೃದ್ಧಿಯಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳ ಕೊಡುಗೆ ಏನೂ ಇಲ್ಲ. ಅದು ನಾನು ಕೊಟ್ಟ ಕೊಡುಗೆಯಷ್ಟೆ ಎಂದು ತಿಳಿಸಿದರು.
ಬೆಂಗಳೂರಿನ ಮಡಿವಾಳ, ಎಲೆಕ್ಟ್ರಾನಿಕ್ಸಿಟಿ ಫ್ಲೈಓವರ್ಗೆ ಅಡಿಪಾಯ ಹಾಕಿದ್ದೇ ನಾನು. ಅರ್ಧ ಕೆಲಸ ಮಾಡಿ ಈಗ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪರ್ಸಂಟೇಜ್ ಬಗ್ಗೆ ಮಾತನಾಡುತ್ತಿವೆ. ಇಬ್ಬರೂ ಪರ್ಸಂಟೇಜ್ ಪಡೆಯುವುದರಲ್ಲಿ ನಿಪುಣರು. ನನ್ನ ಆಡಳಿತದಲ್ಲಿ ಎಷ್ಟು ಪರ್ಸಂಟೇಜ್ ಇತ್ತು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪರ್ಸಂಟೇಜ್ ಇದೆ ಎಂಬುದು ಎಲ್ಲ ಗುತ್ತಿಗೆದಾರರಿಗೆ ಗೊತ್ತಿದೆ ಎಂದು ಚಾಟಿ ಬೀಸಿದರು.
ಸಚಿವ ರಮೇಶ್ಕುಮಾರ್ ಅವರು ಸರ್ಕಾರದ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಸರ್ಕಾರ ಬೇಕಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪರ್ಸಂಟೇಜ್ ಸರ್ಕಾರ ಬೇಕಾ ಎಂಬುದನ್ನು ಜನರೇ ತೀರ್ಮಾನ ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಮೈಸೂರು ಸೇರಿದಂತೆ ಹಲವೆಡೆ ಕೆಲವರು ಬಂಡಾಯ ಎದ್ದಿದ್ದಾರೆ ಎಂದು ಕಿಡಿಕಾರಿದರು.
ಪಕ್ಷದಲ್ಲಿ ಇರುವವರು ಇರಬಹುದು, ಹೋಗುವವರು ಹೋಗಬಹುದು. ಪಕ್ಷದ ಬಾಗಿಲು ತೆಗೆದಿದೆ. ಜೆಡಿಎಸ್ ಯಾರೊಬ್ಬರ ಮನೆಯ ಆಸ್ತಿಯಲ್ಲ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಅವರ ಕುಟುಂಬದವರು ನಮ್ಮ ಪಕ್ಷದ ವಿರುದ್ಧ ಹಿಂದೆ ಒಂದು, ಮುಂದೆ ಒಂದು ಮಾತನಾಡುವುದನ್ನು ಬಿಡಬೇಕು. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರಿಂದ ಪಕ್ಷಕ್ಕೆ ಏನು ಸಿಕ್ಕಿದೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಹೋಗೋರು ಹೋಗಬಹುದು, ಬರುವವರು ಬರಹುದು. ವೈಯಕ್ತಿಕ ವ್ಯಾಮೋಹ ಇಟ್ಟುಕೊಂಡು ಯಾರಿಗೂ ಟಿಕೆಟ್ ಕೊಟ್ಟಿಲ್ಲ. ಪಕ್ಷ ಅಧಿಕಾರಕ್ಕೆ ಬರಲಿ ಎಂಬ ನಿಟ್ಟಿನಲ್ಲಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡಲಾಗಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.