ಹಿರಿಯೂರು, ಮಾ.2-ರೈತರ ಆತ್ಮಹತ್ಯೆಗಳನ್ನು ತಡೆಯುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಗರದ ನೆಹರು ಕ್ರೀಡಾಂಗಣದಲ್ಲಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ವಿಕಾಸಪರ್ವ ಬೃಹತ್ ಸಾರ್ವಜನಿಕ ಸಮಾವೇಶ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸಮಾವೇಶದಲ್ಲಿ ಪ್ರಧಾನಮಂತ್ರಿಗಳು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು 90 ಪರ್ಸೆಂಟ್ ಸರ್ಕಾರ ಎಂದು ಆರೋಪಿಸುತ್ತಿದ್ದಾರೆ. ಹೀಗೆ ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 50 ಸಾವಿರದವರೆಗೆ ರೈತರ ಸಾಲಮನ್ನಾ ಮಾಡುವ ಘೋಷಣೆ ಮಾಡಿದರು. ಆದರೆ, ಅದರ ಪ್ರತಿಫಲ ರೈತರಿಗೆ 10 ತಿಂಗಳಾದರೂ ಇನ್ನು ಸಿಕ್ಕಿಲ್ಲ, ಕಾರಣ ಈ ಸಾಲ ಮನ್ನಾದಲ್ಲಿ 14 ಷರತ್ತುಗಳನ್ನು ಹಾಕಲಾಗಿದೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ನಮ್ಮ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ 24 ಗಂಟೆ ಒಳಗೆ ಯಾವುದೇ ಷರತ್ತುಗಳಿಲ್ಲದೆ ರಾಜ್ಯದ ರೈತರ ಎಲ್ಲಾ ಸಾಲಮನ್ನಾ ಮಾಡಲಾಗುವುದು ಎಂಬ ಭರವಸೆ ನೀಡಿದರು.
ನಮ್ಮಗುರಿ ಈ ರಾಜ್ಯದ ಆರುವರೆ ಕೋಟಿ ಜನರ ಭವಿಷ್ಯವನ್ನು ರೂಪಿಸುವುದೇ ಆಗಿದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಾಣಂತಿಯರಿಗೆ 6 ಸಾವಿರ ರೂ.ಗಳ ಸಹಾಯಧನ, 70 ವರ್ಷದಾಟಿದ ಹಿರಿಯ ನಾಗರೀಕರಿಗೆ 5000 ರೂ.ಗಳ ಮಾಸಿಕವೇತನ, ನಿರುದ್ಯೋಗ ಯುವಕ-ಯುವತಿಯರಿಗೆ ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಪಿಲಾಜನಹಳ್ಳಿ ಜಯಣ್ಣ ಜೆಡಿಎಸ್ ಪಕ್ಷ ಸೇರಿದರು ಇವರನ್ನು ಸಂಭ್ರಮದಿಂದ ಪಕ್ಷದ ಧ್ವಜ ನೀಡುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಪಕ್ಷಕ್ಕೆ ಸ್ವಾಗತಿಸಿದರು.
ಪಕ್ಷಕ್ಕೆ ಸೇರಿದ ನಂತರ ಮಾತನಾಡಿದ ಪಿಲಾಜನಹಳ್ಳಿ ಜಯಣ್ಣ, ಈ ಮೊದಲು ನಾನು ಜನತಾದಳದಲ್ಲೇ ರಾಜಕೀಯ ನೆಲೆ ಕಂಡುಕೊಂಡು ಬೆಳೆದವನು, ಕಾರಣಾಂತರಗಳಿಂದ ಬಿಜೆಪಿಗೆ ಹೋಗಬೇಕಾಯಿತು. ಆದರೆ ಈಗ ನಾನು ಮರಳಿ ಮನೆಗೆ ಬಂದಿದ್ದೇನೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್ಗೌಡ, ಕಂದಿಕೆರೆಯಶೋಧರ, ಮಾಜಿ ಸಚಿª ಸತ್ಯನಾರಾಯಣ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಬಿ.ಹೆಚ್.ಮಂಜುನಾಥ್, ಬಿಎಸ್ಪಿ ಮುಖಂಡ ಸಿದ್ದಪ್ಪ, ಮುಖಂಡರಾದ ವೀರೇಂದ್ರ(ಪಪ್ಪಿ), ಕಾಂತರಾಜು, ಎತ್ತಿನಹಟ್ಟಿಗೌಡ, ಜಯರಾಮಯ್ಯ, ಮಹದೇವಪ್ಪ, ಮೀನಾಕ್ಷಿನಂದೀಶ್, ತಾ.ಪಂ. ಸದಸ್ಯ ಶಂಕರಮೂರ್ತಿ, ಗಿರಿಜಪ್ಪ, ಗುಣಶೇಖರ್, ಕಾ.ಶ್ಯಾಮಯ್ಯ, ದೊರೆಸ್ವಾಮಿಖಂಡರ್, ಪುಷ್ಪರಂಗನಾಥ್, ಪಾಂಡುರಂಗ, ವಿಶ್ವನಾಥ್, ಗೋಪಿಯಾದವ್, ವಕೀಲರಾದ ಶಿವಶಂಕರ್ಮೂರ್ತಿ, ಚಾಂದ್ಪೀರ್ ಮತ್ತಿತರರು ಉಪಸ್ಥಿತರಿದ್ದರು.