ಮೈಸೂರು, ಮಾ.2-ಕೊಟ್ಟವನು ಕೋಡಂಗಿ, ತೆಗೆದುಕೊಂಡವನು ವೀರಭದ್ರ ಎಂಬ ಗಾದೆ ಮಾತಿನಂತೆ ಹಣ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದ ವ್ಯಕ್ತಿಯೊಬ್ಬರನ್ನು ಹಣ ಪಡೆದವರೇ ಬೆದರಿಸಿ ಅವರ ಬಳಿಯಲ್ಲಿದ್ದ ಚಿನ್ನಾಭರಣವನ್ನು ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ಎನ್.ಆರ್.ಮೊಹಲ್ಲಾದ ಮದನ್ ಹಣ ಕೊಡಿಸಿ ಚಿನ್ನದ ಸರ ಕಳೆದುಕೊಂಡಿದ್ದಾರೆ. ಇತ್ತ ಹಣ ನೀಡಿದವರಿಂದಲೂ ಛೀಮಾರಿಗೆ ಒಳಗಾಗಿದ್ದಾರೆ.
ಮದನ್ ಬೃಂದಾವನ ಬಡಾವಣೆಯ ಕಾರ್ತಿಕ್ ಮತ್ತು ರತನ್ ಎಂಬುವರಿಗೆ ಹಣ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದರು.
ಬಹಳ ದಿನಗಳು ಕಳೆದರೂ ಈ ಇಬ್ಬರು ಹಣ ಹಿಂದಿರುಗಿಸಿರಲಿಲ್ಲ.ಹಾಗಾಗಿ ಹಣ ಕೊಟ್ಟವರು ಮದನ್ ಅವರಿಗೆ ಒತ್ತಡ ತಂದು ಹಣ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಹಾಗಾಗಿ ಮದನ್ ಕಾರ್ತಿಕ್ ಮತ್ತು ರತನ್ ಬಳಿ ಹೋಗಿ ಹಣ ಹಿಂದಿರುಗಿಸುವಂತೆ ಸೂಚಿಸಿದ್ದಾರೆ. ಆಗ ಇವರಿಬ್ಬರೂ ಸೇರಿ ಮದನ್ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.
ಈ ಬಗ್ಗೆ ಮದನ್ ಲಷ್ಕರ್ ಠಾಣೆಗೆ ದೂರು ನೀಡಿದ್ದಾರೆ.