ಬೆಂಗಳೂರು, ಮಾ.1- ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕ ಹಾಗೂ ಮಹಿಳೆ ನಡುವೆ ಜಗಳ ನಡೆದು ಮಹಿಳೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸುದ್ದಗುಂಟೆಪಾಳ್ಯ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾವರೆಕೆರೆ ಮುಖ್ಯ ರಸ್ತೆ, ಬಿಟಿಎಂ ಒಂದನೆ ಹಂತದ ಗುಂಡು ತೋಪಿನ ಸ್ಲಂ ಕ್ವಾಟ್ರರ್ಸ್ ನಿವಾಸಿ ಕಮಲಮ್ಮ (55) ಕೊಲೆಯಾದ ಮಹಿಳೆ.
ಈ ಸ್ಲಂ ಕ್ವಾಟ್ರರ್ಸ್‍ನಲ್ಲಿ ಜಗದೀಶ್ ಎಂಬುವವರಿಗೆ ಸೇರಿದ ಮನೆಯಿದ್ದು ಇಲ್ಲಿ ಐದಾರು ವರ್ಷದಿಂದ ಕಮಲಮ್ಮ ಎಂಬುವರು ಲೀಸ್‍ಗೆ ವಾಸವಾಗಿದ್ದರು.
ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ಕುಟುಂಬ ನಿರ್ವಹಿಸುತ್ತಿದ್ದ ಕಮಲಮ್ಮ ಅವರಿಗೆ ಮನೆ ಖಾಲಿ ಮಾಡುವಂತೆ ಹೇಳಿದ್ದರೂ ಇವರು ಖಾಲಿ ಮಾಡಿರಲಿಲ್ಲ. ರಾತ್ರಿ 9.30ರ ಸಂದರ್ಭದಲ್ಲಿ ಜಗದೀಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಇವರ ಮನೆ ಬಳಿ ಬಂದಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಕವಿತಾ ಅವರ ಮಗ, ಮಗಳಿಗೆ ನಿಮ್ಮ ತಾಯಿ ಬಳಿ ಮಾತನಾಡಬೇಕು. ಸ್ವಲ್ಪ ಹೊತ್ತು ಹೊರಗೆ ಇರುವಂತೆ ಹೇಳಿದ್ದರಿಂದ ಇವರಿಬ್ಬರು ಹೊರಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್, ಕಮಲಮ್ಮ ಅವರ ಜತೆ ಜಗಳವಾಡಿದ್ದಾರೆ.
ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋದಾಗ ಜಗದೀಶ್ ಚಾಕುವಿನಿಂದ ಕಮಲಮ್ಮನ ಕುತ್ತಿಗೆ ಇರಿದು ಸ್ನೇಹಿತರೊಂದಿಗೆ ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ಮಕ್ಕಳು ಮನೆಯೊಳಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ತಕ್ಷಣ ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಸುದ್ದಗುಂಟೆಪಾಳ್ಯ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.