ನವದೆಹಲಿ, ಮಾ.1-ನಿಷ್ಠೆ, ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಕಸ್ನಿ 34 ವರ್ಷಗಳ ಸೇವೆ ನಂತರ ನಿವೃತ್ತರಾಗಿದ್ದಾರೆ. ತಮ್ಮ ಸೇವಾವಧಿಯಲ್ಲಿ 71 ಬಾರಿ ವರ್ಗಾವಣೆಯಾಗಿದ್ದ ಅವರು ಆರು ತಿಂಗಳ ವೇತನ ಇಲ್ಲದೇ ನಿವೃತ್ತಿ ಹೊಂದಿರುವುದು ದುರದೃಷ್ಟದ ಸಂಗತಿ.
ಹರಿಯಾಣದ ಭೂ ಬಳಕೆ ಮಂಡಳಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿ (ಒಎಸ್ಡಿ) ಆಗಿ ತಮ್ಮ ಕೊನೆ ಅವಧಿಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ಆದರೆ ಸರ್ಕಾರದ ದಾಖಲೆಗಳ ಪ್ರಕಾರ, ಆ ಹುದ್ದೆಯೇ ಇಲ್ಲ..! ಇದೇ ಕಾರಣಕ್ಕಾಗಿ ಅವರಿಗೆ ಕಳೆದ ಆರು ತಿಂಗಳಿನಿಂದ ಯಾವುದೇ ವೇತನ ಮತ್ತು ಇತರ ಭತ್ಯೆಗಳು ಲಭ್ಯವಾಗಿಲ್ಲ. ಹೀಗಾಗಿ ಸರ್ಕಾರದ ಲೋಪದೋಷದಿಂದಾಗಿ ಅತ್ಯಂತ ಪ್ರಾಮಾಣಿಕ ಉನ್ನತಾಧಿಕಾರಿಯೊಬ್ಬರು ಆರು ತಿಂಗಳ ಸಂಬಳ-ಸಾರಿಗೆ ಇಲ್ಲದೇ ನಿವೃತ್ತರಾಗಿದ್ದಾರೆ.
ತಮಗೆ ಆಗಿರುವ ಅನ್ಯಾಯದ ಬಗ್ಗೆ ಪ್ರದೀಪ್ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮೊರೆ ಹೋಗಿದ್ದಾರೆ. ಈ ಪ್ರಕರಣದ ಬಗ್ಗೆ ಮಾ.8ರಂದು ವಿಚಾರಣೆ ನಡೆಯಲಿದೆ.
ಇವರು ಭೂ ಬಳಕೆ ಮಂಡಳಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿಯೋಜನೆಗೊಂಡ ನಂತರ ಕರ್ತವ್ಯಕ್ಕೆ ಹಾಜರಾದಾಗ ಮಂಡಳಿ ಬಿಕೋ ಎನ್ನುತ್ತಿತ್ತು. ಅಲ್ಲಿ ನೌಕರರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮತ್ತು ಕಚೇರಿ ಕಡತಗಳು ಕಣ್ಮರೆಯಾಗಿದ್ದವು. ಈ ಬಗ್ಗೆ ಅವರು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಅವರು ಮಾಹಿತಿ ಹಕ್ಕು ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಅದರಿಂದ ಬಂದ ಉತ್ತರ ನೋಡಿ ಕಂಗಾಲಾದರು. 2008ರಿಂದ ಮಂಡಳಿ ಅಸ್ತಿತ್ವದಲ್ಲೇ ಇರಲಿಲ್ಲ. ಈ ಬಗ್ಗೆ ಹರಿಯಾಣ ಸರ್ಕಾರಕ್ಕೆ ತಿಳಿಸಿದಾಗ ಹೌದು ಕಳೆದ 10 ವರ್ಷಗಳಿಂದ ಈ ಮಂಡಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿತು.
ಈ ಮಂಡಳಿಯನ್ನು ಪುನ:ಶ್ಚೇತನಗೊಳಿಸಲು ಪಟ್ಟ ಪರಿಶ್ರಮ ನಿರರ್ಥಕವಾಯಿತು. ಈ ಮಧ್ಯೆ ಅವರು ನಿವೃತ್ತರಾದರು. ತಮ್ಮ ಹಕ್ಕಿಗಾಗಿ ನಿವೃತ್ತಿ ನಂತರವೂ ಹೋರಾಟ ಮುಂದುವರಿಸಿದ್ದಾರೆ.
1984ರ ಬ್ಯಾಚ್ನ ಹರಿಯಾಣ ಸಿವಿಲ್ ಸರ್ವಿಸ್ ಅಧಿಕಾರಿಯಾದ ಇವರ ನಂತರ ಐಎಎಸ್ ಅಧಿಕಾರಿಯಾದರು ವಿವಿಧ ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಪ್ರದೀಪ್ ಕಸ್ನಿ ನಿಷ್ಠೆ-ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದು. ಅದರ ಪರಿಣಾಮ 71 ಬಾರಿ ಎತ್ತಂಗಡಿಗೆ ಒಳಗಾದರು. ಇವರ ಪತ್ನಿ ನೀಲಂ ಕಸ್ನಿ ಹರಿಯಾಣ ಸರ್ಕಾರದಲ್ಲಿ ಸಹಾಯಕ ವಿಭಾಗೀಯ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.