ನವದೆಹಲಿ/ಅಬುಧಾಬಿ, ಮಾ.1-ಪ್ರಧಾನಿ ನರೇಂದ್ರ ಮೋದಿ ಅವರು ಸಂಯುಕ್ತ ಅರಬ್ ಗಣರಾಜ್ಯಕ್ಕೆ(ಯುಎಇ) ಭೇಟಿ ನೀಡಿದ ಎರಡು ವಾರಗಳ ಬಳಿಕ ಮಹತ್ವದ ಬೆಳವಣಿಗೆಯೊಂದರಲ್ಲಿ ಬಂಧಿತರಾದ ಭಾರತೀಯ ಮೂಲದ ಐವರು ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರನ್ನು ಯುಎಇ ಭಾರತಕ್ಕೆ ಹಸ್ತಾಂತರಿಸಲಿದೆ.
ಈ ಐವರು ಭಾರತದಿಂದ ಮತ್ತಷ್ಟು ಯುವಕರನ್ನು ನೇಮಕ ಮಾಡಿಕೊಂಡು ಕಾಶ್ಮೀರ ಸೇರಿದಂತೆ ವಿವಿಧೆಡೆ ಜಿಹಾದ್ ಯುದ್ಧ ನಡೆಸಲು ಸಂಚು ರೂಪಿಸಿದ್ದರು.
ಯುಎಇನ ವಿವಿಧೆಡೆ ಬಂಧಿತರಾದ ಭಾರತೀಯ ಮೂಲದ ಈ ಐವರು ಐಎಸ್ ಭಯೋತ್ಪಾದಕರನ್ನು ಯುಎಇ ಗುಪ್ತಚರ ಸಂಸ್ಥೆಗಳು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಭಾರತದ ಕೋರಿಕೆ ಮೇರೆಗೆ ನವದೆಹಲಿಗೆ ಹಸ್ತಾಂತರಿಸಲಾಗುತ್ತಿದೆ.
ಈ ಐವರಲ್ಲಿ ಒಬ್ಬನನ್ನು ಉತ್ತರ ಪ್ರದೇಶದ ರೆಹಾನ್ ಅಬಿದಿ ಎಂದು ಗುರುತಿಸಲಾಗಿದೆ. ಉಳಿದವರಲ್ಲಿ ತಲಾ ಇಬ್ಬರು ಮುಂಬೈ ಮತ್ತು ಚೆನ್ನೈನವರಾಗಿದ್ದಾರೆ.
ಇವರೆಲ್ಲರೂ 20-25 ವರ್ಷ ವಯೋಮಾನದವರಾಗಿದ್ದು, ಪರಸ್ಪರ ನಿಕಟ ಸಂಬಂಧ ಹೊಂದಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಬಗ್ಗೆ ಒಲವು ಹೊಂದಿ ಭಾರತದಿಂದ ತೆರಳಿ ಐಎಸ್ಗೆ ಸೇರ್ಪಡೆಯಾಗಿ ತರಬೇತಿ ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಐವರು ಐಎಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಭಾರತದಿಂದ ಮತ್ತಷ್ಟು ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸಿಕೊಂಡು, ದೇಶದ ವಿವಿಧೆಡೆ ಜಿಹಾದ್ ಯುದ್ಧ ಮತ್ತು ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐವರು ಯುವಕರು 18 ಮತ್ತು 19ನೇ ವರ್ಷದಲ್ಲಿ ಉಮ್ರಾಹ್(ಇಸ್ಲಾಂ ಪವಿತ್ರಯಾತ್ರೆ) ಕೈಗೊಂಡಿದ್ದು, ಬಲವಾದ ಧಾರ್ಮಿಕ ನಂಬಿಕೆ ಹೊಂದಿದ್ದಾರೆ. ಐಎಸ್ ಬಗ್ಗೆ ಅಪಾರ ಒಲವು ಹೊಂದಿ ಭಯೋತ್ಪಾದನೆ ಸಂಘಟನೆಗೆ ಸೇರಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ರೆಹಾನ್ ಅಬಿದಿ ಸೇರಿದಂತೆ ಐವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಭಾರತದಲ್ಲಿ ಇವರಿಗೆ ಇರಬಹುದಾದ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಭಾರತಕ್ಕೆ ಇವರನ್ನು ಹಸ್ತಾಂತರಿಸಿದ ಬಳಿಕ ಮತ್ತಷ್ಟು ವಿವರಗಳು ತನಿಖೆಯಿಂದ ಲಭ್ಯವಾಗುವ ನಿರೀಕ್ಷೆ ಇದೆ.