ಮತ್ತೊಂದು ಬ್ಯಾಂಕ್ ವಂಚನೆ ಪ್ರಕರಣ ಬಯಲು

ನವದೆಹಲಿ:ಮಾ-1: ಮತ್ತೊಂದು ಬಹುಕೋಟಿ ಬ್ಯಾಂಕ್‌ ವಂಚನೆ ಪ್ರಕರಣ ಬಯಲಾಗಿದೆ. ಕೋಲ್ಕತ್ತದ ಕಂಪ್ಯೂಟರ್‌ ತಯಾರಿಕಾ ಕಂಪನಿ ಮೆ. ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ವಿರುದ್ಧ ಕೆನರಾ ಬ್ಯಾಂಕ್‌ ನೇತೃತ್ವದ ಬ್ಯಾಂಕುಗಳ ಒಕ್ಕೂಟವು 515.15 ಕೋಟಿ ರೂ ವಂಚನೆ ಪ‍್ರಕರಣದ ದಾಖಲಿಸಿದೆ.

ಒಂದು ತಿಂಗಳ ಅವಧಿಯಲ್ಲಿ ದಾಖಲಾದ ಐದನೇ ಬಹುಕೋಟಿ ಬ್ಯಾಂಕ್ ವಂಚನೆ ಹಗರಣ ಇದಾಗಿದೆ. ಮೊದಲಿಗೆ ಆಭರಣ ವ್ಯಾಪಾರಿ ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 12,636 ಕೋಟಿ ವಂಚಿಸಿದ ಪ್ರಕರಣ ಬಯಲಾಗಿತ್ತು.

ಹತ್ತು ಬ್ಯಾಂಕುಗಳ ಒಕ್ಕೂಟವು ಈ ಸಾಲ ನೀಡಿತ್ತು. ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ನ ನಿರ್ದೇಶಕರಾದ ಶಿವಾಜಿ ಪಂಜಾ, ಕೌಸ್ತವ್‌ ರಾಯ್‌ ಮತ್ತು ವಿಜಯ್‌ ಬಾಫ್ನಾ, ಉಪಾಧ್ಯಕ್ಷ ದೇವನಾಥ್‌ ಪಾಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಕಂಪನಿಯು ‘ಚಿರಾಗ್‌’ ಎಂಬ ಬ್ರ್ಯಾಂಡ್‌ನಲ್ಲಿ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ತಯಾರಿಸುತ್ತಿತ್ತು. ಕಂಪ್ಯೂಟರ್‌ ದುರಸ್ತಿ, ನೆಟ್‌ವರ್ಕಿಂಗ್‌ ಮುಂತಾದ ಸೇವೆಗಳನ್ನೂ ಒದಗಿಸುತ್ತಿತ್ತು. ದೇಶದ ವಿವಿಧ ಭಾಗಗಳಲ್ಲಿ ಕಂಪನಿಯು ಶಾಖೆಗಳನ್ನು ಹೊಂದಿದೆ.

ಉತ್ಪ್ರೇಕ್ಷಿತ ಷೇರು ಮೌಲ್ಯ, ಸುಳ್ಳು ದಾಖಲೆಗಳನ್ನು ಬಳಸಿಕೊಂಡು ಕಂಪನಿಯು ಸಾಲ ಪಡೆದುಕೊಂಡಿದೆ ಎಂದು ಕೆನರಾ ಬ್ಯಾಂಕ್‌ ಆರೋಪಿಸಿದೆ. ಈ ಹಗರಣದಲ್ಲಿ ಕೆಲವು ಬ್ಯಾಂಕ್‌ ಅಧಿಕಾರಿಗಳು ಶಾಮೀಲಾಗಿರಬಹುದು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

2012ರಿಂದ ಈ ಕಂಪನಿಯ ಖಾತೆಯಲ್ಲಿದ್ದ ಹಣದ ಪ್ರಮಾಣ ಕಡಿಮೆಯಾಗುತ್ತಲೇ ಬಂದಿತ್ತು. ಮಾರಾಟ ಮತ್ತಿತರ ವಹಿವಾಟುಗಳಿಂದ ಬಂದ ಮೊತ್ತವನ್ನು ಈ ಕಂಪನಿ ಸಾಲ ಖಾತೆಗೆ ಹಾಕಿಲ್ಲ. ಬೇರೆ ಖಾತೆಯ ಮೂಲಕ ಈ ಹಣ ಪಡೆದು ವಂಚಿಸಿದ್ದಾರೆ. ಕಂಪನಿಗೆ ಬರಬೇಕಿರುವ ಮೊತ್ತವನ್ನು ಉತ್ಪ್ರೇಕಿಸಿ ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗೇಲ್‌ ಇಂಡಿಯಾ, ವಿನ್ಸೆಂಟ್‌ ಎಲೆಕ್ಟ್ರಾನಿಕ್ಸ್‌ (ರೂರ್ಕೆಲಾ) ಮತ್ತು ಸಿಯೆಟ್‌ ಲಿ. ಕಂಪನಿಗಳಿಂದ ಹಣ ಬರುವುದಕ್ಕಿದೆ ಎಂದು ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ಹೇಳಿತ್ತು. ಆದರೆ, ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ಜತೆಗೆ ತಮಗೆ ಯಾವುದೇ ವಹಿವಾಟು ಇಲ್ಲ ಎಂದು ಈ ಕಂಪನಿಗಳು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ತಿಳಿಸಿದ್ದವು.

  • ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ– 84.28 ಕೋಟಿ
  • ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೆರ್‌ ಮತ್ತು ಜೈಪುರ– 77.41 ಕೋಟಿ
  • ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌– 73.12 ಕೋಟಿ
  • ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ– 71.62 ಕೋಟಿ
  • ಅಲಹಾಬಾದ್‌ ಬ್ಯಾಂಕ್‌–  47.66 ಕೋಟಿ
  • ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌– 42.13 ಕೋಟಿ
  • ಕೆನರಾ ಬ್ಯಾಂಕ್‌– 40.50 ಕೋಟಿ
  • ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲ– 40.13 ಕೋಟಿ
  • ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ– 28.30 ಕೋಟಿ
  • ಫೆಡರಲ್‌ ಬ್ಯಾಂಕ್‌– 10.00 ಕೋಟಿ

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ