ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಶಾಸಕ ಎನ್.ಎ.ಹ್ಯಾರೀಸ್
ಬೆಂಗಳೂರು,ಮಾ.1-ಪ್ರತಿಯೊಬ್ಬರು ಉತ್ತಮ ಮನುಷ್ಯರಾಗಬೇಕು. ತಪ್ಪು ಯಾರೇ ಮಾಡಿದರೂ ತಪ್ಪೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ.ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಶಾಸಕ ಎನ್.ಎ.ಹ್ಯಾರೀಸ್ ಇಂದಿಲ್ಲಿ ಹೇಳಿದರು.
ತಮ್ಮ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ತಮ್ಮ ಮಗ ನಲಪಾಡ್ ವಿಷಯ ಪ್ರಸ್ತಾಪಿಸಿ, ಮನಸು ನೋಯಿಸುವಂತಹ ರಾಜಕೀಯ ಮಾಡಬಾರದು. ಪ್ರತಿಯೊಬ್ಬರು ಉತ್ತಮ ಮನುಷ್ಯರಾಗಬೇಕು. ನಾವೆಲ್ಲರೂ ಒಳ್ಳೆಯವರಾಗಿ ಬದುಕೋಣ ಎಂದರು.
ಯಾರೇ ಆಗಲಿ ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ತಮ್ಮ ಮಗನ ಪ್ರಕರಣವನ್ನು ನೇರವಾಗಿ ಉಲ್ಲೇಖಿಸದೆ ಮಾತನಾಡಿದರು.
ಮೊಹಮ್ಮದ್ ನಲಪಾಡ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅಭಿವೃದ್ದಿ ಬಗ್ಗೆ ಮಾತ್ರ ಕೇಳಿ. ಬೇರೆ ವಿಚಾರವಾಗಿ ನಾನು ಮಾತನಾಡುವುದಿಲ್ಲ. ನಿಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದರು.
ಚರ್ಚ್ ಸ್ಟ್ರೀಟ್ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆಗೆ ಬಾರದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಹ್ಯಾರೀಸ್ ಅವರು ತುರ್ತು ಕಾರ್ಯಕ್ರಮವಿದ್ದ ಕಾರಣ ವೇದಿಕೆಗೆ ಸಿಎಂ ಆಗಮಿಸಲಿಲ್ಲ. ಅವರು ಪಾವಗಡಕ್ಕೆ ತೆರಳಿದರು. ಬೇರೆ ಯಾವ ಕಾರಣವೂ ಇಲ್ಲ ಎಂದು ಪ್ರತಿಕ್ರಿಯಿಸಿದರು.