ಬಾಕಿ ಉಳಿದ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿ: ಡಾ.ಇ.ವಿ.ರಮಣರೆಡ್ಡಿ
ಬೀದರ,:- ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ನಿರ್ಮಿತಿ ಕೇಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು
ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಶೀಘ್ರ
ಪೂರ್ಣಗೊಳಿಸಬೇಕೆಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ
ಕಾರ್ಯದರ್ಶಿಗಳಾದ ಡಾ.ಇ.ವಿ.ರಮಣರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ
ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಒಳಗೊಂಡಂತೆ ಯಾವುದೇ
ಇಲಾಖೆಗೆ ಕಟ್ಟಡಗಳ ನಿರ್ಮಾಣಕ್ಕಾಗಿ ನಿವೇಶನದ ಬೇಡಿಕೆ, ಹಣಕಾಸು ಕೊರತೆಯಾಗಿರುವ ಬಗ್ಗೆ ಮಾಹಿತಿ ನೀಡಿದಲ್ಲಿ
ಸಂಬಂಧಿಸಿದ ಅಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರೇಮಸಾಗರ ದಾಂಡೇಕರ್ ಮಾತನಾಡಿ, ಬೊಮ್ಮಗೊಂಡೇಶ್ವರ
ಭವನ ನಿರ್ಮಾಣಕ್ಕಾಗಿ ಬಿಡುಗಡೆಯಾಗಿರುವ ಅನುದಾನ ಕಾರಣಾಂತಗಳಿಂದ ವಾಪಸ್ಸು ಹೋಗಿದೆ. ಈ ಹಣವನ್ನು
ಮತ್ತೆ ಬಿಡುಗಡೆ ಮಾಡಬೇಕೆಂದು ಕೋರಿದರು.
ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣ, ಪಾಲಿ
ಹೌಸ್ ನಿರ್ಮಾಣ, ಸ್ಪ್ರಿಂಕ್ಲರ್ ಮತ್ತು ನೆರಳು ಪರದೆಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಪಶು
ಸಂಗೋಪನೆ ಇಲಾಖೆಯ ಉಪನಿರ್ದೇಶಕರು ಮಾತನಾಡಿ, ಕೃತಕ ಗರ್ಭಧಾರಣೆಯ ಯೋಜನೆಯನ್ನು ಜಿಲ್ಲೆಯಲ್ಲಿ
ಶೇ.100ರಷ್ಟು ಅನುಷ್ಠಾನಕ್ಕೆ ತರಲಾಗಿದೆ. ಪಶುಭಾಗ್ಯ ಯೋಜನೆಯಡಿ ಪಶುಗಳ ವಿತರಣೆಗೆ ಹುಮನಾಬಾದ
ಹೊರತುಪಡಿಸಿ ಎಲ್ಲಾ ತಾಲೂಕುಗಳ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ
ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿ, ಕಾಲ-ಕಾಲಕ್ಕೆ ವೈದ್ಯರ ನೇಮಕಾತಿ ನಡೆಸಿ ಎಲ್ಲಾ
ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಿ. ಆಸ್ಪತ್ರೆಗಳ ಕಟ್ಟಡ ಕಾಮಗಾರಿಗಳನ್ನು ಶೀಘ್ರ
ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.