ಬೆಂಗಳೂರು, ಮಾ.1- ನಗರದ ಜನತೆಗೆ ಮೂಲಭೂತ ಸೌಕರ್ಯಗಳ ಕೊರತೆ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲೆ ದೌರ್ಜನ್ಯ, ಮಕ್ಕಳ ಮೇಲೆ ಅತ್ಯಾಚಾರ, ಕುಡಿಯುವ ನೀರು, ಕಸ ನಿರ್ವಹಣೆಯಲ್ಲಿ ವಿಫಲ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ಜನರಿಗೆ ಮಾಡಿರುವ ವಂಚನೆಯ ಚಾರ್ಜ್ಶೀಟ್(ದೋಷಾರೋಪಪಟ್ಟಿ)ಯನ್ನು ಬಿಜೆಪಿ ಇಂದು ಬಿಡುಗಡೆ ಮಾಡುವ ಮೂಲಕ ಕನ್ನಡಿಗರಿಗೆ ಲೆಕ್ಕ ಕೊಡಿ ಎಂದು ಸವಾಲು ಹಾಕಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೆಡ್ಕರ್, ಕೇಂದ್ರ ಸಚಿವ ಅನಂತ್ಕುಮಾರ್, ಶಾಸಕರಾದ ಡಾ.ಅಶ್ವತ್ಥನಾರಾಯಣ, ಸುರೇಶ್ಕುಮಾರ್, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಕೆಲವು ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಚಾರ್ಜ್ಶೀಟ್ ಬಿಡುಗಡೆ ಮಾಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಗರದ ಜನತೆಗೆ ಸಾರಾಸಗಟವಾಗಿ ತಿರಸ್ಕರಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ರೈಲ್ವೆ ಸಚಿವ ಪ್ರಕಾಶ್ ಜಾವೆಡ್ಕರ್ ಮಾತನಾಡಿ, ಐಟಿ-ಬಿಟಿ, ಉದ್ಯಾನನಗರಿ ಎಂಬ ಹಣೆಪಟ್ಟಿ ಇದ್ದ ಬೆಂಗಳೂರು ಈಗ ಅತ್ಯಾಚಾರಿಗಳ ನಗರ, ಗಾರ್ಬೇಜ್ ಸಿಟಿ, ಕಾನೂನು ಸುವ್ಯವಸ್ಥೆ ಕುಸಿತ, ಹಾಡಹಗಲೇ ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚರ, ಹಲ್ಲೆ, ಜನಪ್ರತಿನಿಧಿಗಳ ಮಕ್ಕಳು ಹಾಗೂ ಅವರ ಬೆಂಬಲಿಗರ ಗೂಂಡಾವರ್ತನೆ ಸೇರಿದಂತೆ ಹತ್ತುಹಲವು ಸಮಸ್ಯೆಗಳಿಂದ ನಗರದ ಜನತೆಯನ್ನು ಸಂಕಷ್ಟಕ್ಕೆ ದೂಡಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಹಗರಣಗಳೇ ರಾರಾಜಿಸುತ್ತಿವೆ ಎಂದು ಕಿಡಿ ಕಾರಿದರು.
ವಾಮಮಾರ್ಗದ ಮೂಲಕ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಗರದ ಜನತೆಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿತ್ತು. ಆದರೆ, ಯಾವುದೇ ಭರವಸೆಗಳು ಇದುವರೆಗೂ ಈಡೇರದೆ ಕೇವಲ ಕಾಗದದ ಮೇಲೆ ಭರವಸೆಗಳಾಗಿಯೇ ಉಳಿದಿವೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲೂ ಸರ್ಕಾರ ವಿಫಲವಾಗುತ್ತಿದೆ. ಪ್ರತಿಯೊಂದರಲ್ಲೂ ಹಗರಣಗಳ ಸರಮಾಲೆಯೇ ನಡೆಯುತ್ತಿದೆ ಎಂದು ಜಾವೆಡ್ಕರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ 24ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲು 460ಕೋಟಿ ಖರ್ಚು ಮಾಡಿದ್ದೇವೆ ಎಂದು ಬಿಬಿಎಂಪಿ ಹೇಳುತ್ತದೆ. ಆದರೆ, ಈವರೆಗೂ ಯಾವುದೇ ರಸ್ತೆಗಳಲ್ಲಿ ಸಂಪೂರ್ಣವಾಗಿ ಗುಂಡಿ ಮುಚ್ಚದೆ ಪ್ರತಿನಿತ್ಯ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಸಂಚಾರ ದಟ್ಟಣೆ ನಿವಾರಣೆಗೆ 1800 ಕೋಟಿ ರೂ. ವೆಚ್ಚದಲ್ಲಿ ಸ್ಟ್ರೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಮುಂದಾಗಿತ್ತು. ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆ ಕೈ ಬಿಡಲಾಯಿತು. ಇದು ಬಿಬಿಎಂಪಿ ಆಡಳಿತ ವೈಖರಿ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ವೈಟ್ಟಾಪಿಂಗ್ ಮಾಡಲು 1000ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಲೆಕ್ಕ ಕೊಡಲಾಗಿದೆ. ಕೇವಲ 100 ಕೋಟಿಯಲ್ಲಿ ಇದನ್ನು ಮಾಡಬಹುದಿತ್ತು. ವೈಟ್ಟಾಪಿಂಗ್ ನಡೆಯುತ್ತಿರುವ ಪರಿಣಾಮ ಇಂದು ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕೆಂಪೇಗೌಡ ಲೇಔಟ್ನಿಂದ ಮೈಸೂರು ರಸ್ತೆ ವರೆಗೆ ಕೇವಲ 12 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ 468ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಲೆಕ್ಕ ನೀಡಲಾಗಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದರು.
ನಗರದಲ್ಲಿ ಕಳೆದ ವರ್ಷ ಕಾಲುವೆಗಳನ್ನು ಸರಿಯಾಗಿ ದುರಸ್ತಿ ಮಾಡದ ಪರಿಣಾಮ ಮಳೆ ಬಂದ ಸಮಯದಲ್ಲಿ 16 ಜೀವಗಳು ಬಲಿಯಾದವು. ಸುಮಾರು 1600 ಕೋಟಿ ನಷ್ಟವಾಯಿತು. 300ಕ್ಕಿಂತ ಹೆಚ್ಚು ಮನೆಗಳು ನೆಲಸಮವಾದವು. ಆದರೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನಾವು ನ್ಯೂಯಾರ್ಕ್ ನಗರಕ್ಕಿಂತಲೂ ಹೆಚ್ಚು ಸಮರ್ಥವಾಗಿ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದ ನಗರವನ್ನು ದೇಶದಲ್ಲೇ ನಂ.1 ಸ್ಮಾರ್ಟ್ ಸಿಟಿ ಮಾಡುವ ಸಾಕಷ್ಟು ಅವಕಾಶಗಳಿದ್ದವು. ಆದರೆ, ಸರ್ಕಾರ ಹಾಗೂ ಬಿಬಿಎಂಪಿ ಬೇಜವಾಬ್ದಾರಿಯಿಂದಾಗಿ ಇದು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.
ಸಂಚಾರ ದಟ್ಟಣೆ ನಿವಾರಿಸಲು ಯಾವುದೇ ವೈಜ್ಞಾನಿಕ ಕ್ರಮ ಕೈಗೊಳ್ಳದ ಪರಿಣಾಮ ಪ್ರಮುಖ ರಸ್ತೆಗಳಲ್ಲಿ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೇವಲ ಬಾಯಿಮಾತಿನಲ್ಲಿ ಮಾತ್ರ ಫ್ಲೈಓವರ್, ಅಂಡರ್ಪಾಸ್ ನಿರ್ಮಾಣವಾಗುತ್ತಿದೆಯೇ ಹೊರತು ಅನುಷ್ಠಾನವಾಗುವುದು ಯಾವಾಗ ಎಂದು ಪ್ರಶ್ನಿಸಿದರು.
ಕಸ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಸದ ಉಪಕರಣ ತಯಾರಿಕಾ ಕಾರ್ಖಾನೆಗಳಿಂದ ಲಂಚ ತೆಗೆದುಕೊಳ್ಳುವುದರಲ್ಲೇ ಸರ್ಕಾರ ಕಾಲ ಕಳೆಯುತ್ತಿದೆ. ಘನತ್ಯಾಜ್ಯ ನಿರ್ವಹಣೆಯಲ್ಲಿ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸರ್ಕಾರದ ಜತೆ ಶಾಮೀಲಾಗಿ ಕಸನಗರವನ್ನಾಗಿ ಪರಿವರ್ತಿಸಿದ್ದಾರೆ. ಒಂದು ಕಾಲದಲ್ಲಿ ಐಟಿ-ಬಿಟಿ ಸಿಟಿಯಾಗಿದ್ದ ಬೆಂಗಳೂರು ಇಂದು ಗಾರ್ಬೆಜ್ ಸಿಟಿಯಾಗಿದೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನ ಅಮೂಲ್ಯ ಕೆರೆಗಳಾದ ಬೆಳ್ಳಂದೂರು, ವರ್ತೂರು, ಹೆಬ್ಬಾಳ, ಹೆಸರಘಟ್ಟ, ವಿಜಯಪುರ ಕೆರೆಗಳನ್ನು ನುಂಗಿ ನೀರು ಕುಡಿಯಲಾಗಿದೆ. ಜನಪ್ರತಿನಿಧಿಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು ಒತ್ತುವರಿ ಮಾಡಿಕೊಂಡರೂ ಸರ್ಕಾರ ಗಮನಹರಿಸದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ಈ ಹಿಂದೆ ದೇಶ-ದೇಶಗಳಿಂದ ಬೆಂಗಳೂರಿನಲ್ಲಿ ಬಂಡವಾಳ ಹೂಡಲು, ಕೈಗಾರಿಕೆ ಸ್ಥಾಪನೆ ಮಾಡಲು ಸಾಕಷ್ಟು ಉದ್ಯಮಿಗಳು ಮುಂದೆ ಬರುತ್ತಿದ್ದರು. ಸರ್ಕಾರ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿದ್ದರಿಂದ ಉದ್ಯಮಿಗಳು ಬೇರೆ ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ದೂರಿದರು.
ಬಡಾವಣೆ ನಿರ್ಮಾಣ, ವಸತಿ ನಿರ್ಮಾಣಗಳಲ್ಲೂ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ. ಇಲ್ಲಿ ಕಮಿಷನ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು.