ಮುಂಬೈ, ಫೆ.28-ದುಬೈನ ಪಂಚಾತಾರ ಹೊಟೇಲ್ನಲ್ಲಿ ಆಕಸ್ಮಿಕವಾಗಿ ಬಾತ್ ಟಪ್ಗೆ ಬಿದ್ದು ದುರಂತ ಸಾವಿಗೀಡಾದ ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಪಾರ್ಥಿವ ಶರೀರಕ್ಕೆ ಅಸಂಖ್ಯಾತ ಅಭಿಮಾನಿಗಳು, ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಡೀ ಮುಂಬೈ ನಗರ ಇಂದು ಶೋಕ ಸಾಗರದಲ್ಲಿ ಮುಳುಗಿತ್ತು.
ನಿನ್ನೆ ರಾತ್ರಿ ದುಬೈನಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಲೋಖಂಡ್ವಾಲಾದಲ್ಲಿರುವ ಅನಿಲ್ ಕಪೂರ್ ಅವರ ನಿವಾಸದಲ್ಲಿ ಇಡಲಾಗಿತ್ತು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಭಾರತೀಯ ಸಿನಿರಂಗದ ಗಣ್ಯರು ಶ್ರೀದೇವಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ಅಮಿತಾಭ್ ಬಚ್ಚನ್, ಹೇಮಾಮಾಲಿನಿ, ಜಯಪ್ರದಾ ಸೇರಿದಂತೆ ಚಿತ್ರರಂಗದ ಅನೇಕ ಖ್ಯಾತನಾಮರು, ಕರಣ್ಜೋಹರ್ ಸೇರಿದಂತೆ ಹಲವಾರು ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು, ತಂತ್ರಜ್ಞರು ಅಂತಿಮ ನಮನ ಸಲ್ಲಿಸಿದರು.
ಬೆಳಗ್ಗೆ 9.30ಕ್ಕೆ ಶ್ರೀದೇವಿ ಅವರ ಕಳೇಬರವನ್ನು ಮುಂಬೈನ ಸೆಲೆಬ್ರೇಷನ್ ಕ್ಲಬ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಶ್ರೀದೇವಿಯ ಅಂತಿಮ ಆಸೆಯಂತೆ ಮೇಕಪ್ ಮಾಡಿ, ಅವರ ಇಷ್ಟದಂತೆ ಕೆಂಪು ಬಣ್ನದ ಚಿನ್ನದ ಲೇಪವಿರುವ ಕಾಂಚೀವರಂ ಸೀರೆಯನ್ನು ಉಡಿಸಿ, ಮಲ್ಲಿಗೆ ಹೂವನ್ನು ಮುಡಿಸಲಾಗಿತ್ತು. ಸಕಲ ಸರ್ಕಾರಿ ಗೌರವಗಳಿಂದ ಅವರಿಗೆ ರಾಷ್ಟ್ರಧ್ವಜವನ್ನು ಹೊದಿಸಲಾಗಿತ್ತು.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಸಹಸ್ರಾರು ಅಭಿಮಾನಿಗಳು ಮತ್ತು ನಾಗರಿಕರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ಅಭಿನೇತ್ರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮಧ್ಯಾಹ್ನ 12.30ರವರೆಗೆ ಸಾರ್ವಜನಿಕ ದರ್ಶನದ ನಂತರ ಅಂತಿಮ ಯಾತ್ರೆ ಅರಂಭವಾಯಿತು. ಅಂತಿಮ ಯಾತ್ರೆಯಲ್ಲಿ ಚಿತ್ರ ರಂಗದ ಗಣ್ಯರು ಮತ್ತು ಸಾವಿರಾರು ಅಬಿಮಾನಿಗಳು ಭಾಗಿಯಾದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆಯ ಎರೆಡು ಕಡೆಗಳಲ್ಲಿ ಜನಸಾಗರವೆ ಕಿಕ್ಕಿರಿದು ಸೇರಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಿಗಿ ಪೋಲಿಸ್ ಭದ್ರತೆ ಕೊಡಲಾಗಿತ್ತು, ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಪಕ್ಕದಲ್ಲೇ ಪತಿ ಬೋನಿ ಕಪೂರ್ ಕುಳಿತಿದ್ದರು. ಒಟ್ಟು 8 ಕಿ.ಮೀ. ಉದ್ದದ ಅಂತಿಮ ಯಾತ್ರೆ ವಿಲೇಪಾರ್ಲೆಯಲ್ಲಿರುವ ಸೇವಾ ಸಮಾಜದ ಚಿತಾಗಾರವನ್ನು ತಲುಪಿತು.
ಶ್ರೀದೇವಿಯ ಆಸೆಯಂತೆ ಆಯ್ಯಂಗಾರ್ ಸಂಪ್ರದಾಯದಂತೆ ನೆರವೇರಿಸಲು ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಮಾಡಲಾಯಿತು. ಗಣ್ಯರು, ಸಿನಿರಂಗದ ಗಣ್ಯರು, ಉದ್ಯಮಿಗಳು ಮತ್ತು ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಹಿಂದೂ ಸಂಪ್ರದಾಯದಂತೆ ಎಲ್ಲಾ ವಿಧಿ ವಿದಾನಗಳು ಮುಗಿದ ನಂತರ ಪತಿ ಬೋನಿ ಕಪೂರ್ ಚಿತೆಗೆ ಆಗ್ನಿ ಸ್ಪರ್ಷ ಮಾಡಿದರು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಸೋದರ ಸಂಬಂಧಿ ವಿವಾಹಕ್ಕೆ ಪತಿ ಬೋನಿಕಪೂರ್ ಮತ್ತು ಮಗಳೊಂದಿಗೆ ತೆರಳಿದ್ದ ಶ್ರೀದೇವಿ ಸಾವಿಗೆ ಮುನ್ನಾ ದಿನ ಮದುವೆ ಸಮಾರಂಭದಲ್ಲಿ ನಟ ಅನಿಲ್ ಕಪೂರ್ ಜೊತೆ ಖುಷಿಯಿಂದ ನೃತ್ಯ ಮಾಡಿದ್ದರು.
ಕೊನೆಗೂ ಚಿತ್ರರಂಗದ ದೇವತೆಯಾಗಿದ್ದ ಶ್ರೀದೇವಿಯ ದೇಹ ಪಂಚಭೂತಗಳಲ್ಲಿ ಲೀನವಾಯಿತು. ಇನ್ನು ಮುಂದೆ ಶ್ರೀದೇವಿ ನೆನಪು ಮಾತ್ರ.