ಮತ ಯಂತ್ರಗಳಿಗೆ ವಿವಿ ಪ್ಯಾಟ್ ಬಳಸುತ್ತಿರುವುದರಿಂದ ಅಕ್ರಮಗಳಿಗೆ ಅವಕಾಶ ಇಲ್ಲ: ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್

ಬೆಂಗಳೂರು, ಫೆ.28- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾಗುವ ಮತಯಂತ್ರಗಳು ಎಲ್ಲಾ ರೀತಿಯ ಪರಿಶೀಲನೆಗೊಳಪಟ್ಟಿದ್ದು, ಕರಾರುವಕ್ಕಾಗಿವೆ. ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ಇಲ್ಲ ಮತ್ತು ಎಲ್ಲಾ ಮತ ಯಂತ್ರಗಳಿಗೂ ವಿವಿ ಪ್ಯಾಟ್ ಬಳಸುತ್ತಿರುವುದರಿಂದ ಅನಗತ್ಯವಾದ ಆತಂಕ ಬೇಡ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದರು.

ತಮ್ಮ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಯಂತ್ರಗಳಿಗೆ ವಿವಿ ಪ್ಯಾಟ್ ಬಳಸುತ್ತಿರುವುದರಿಂದ ಮತ ಹಾಕಿದವರು ಏಳು ಸೆಕೆಂಡ್‍ಗಳ ಕಾಲ ಪರಿಶೀಲನೆ ಮಾಡಬಹುದು. ತಾವು ಚಲಾಯಿಸಿದ ಮತ ನಿರ್ದಿಷ್ಟ ವ್ಯಕ್ತಿಗೆ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಒಂದು ವೇಳೆ ಬೇರೆ ವ್ಯಕ್ತಿಗೆ ಮತ ಚಲಾವಣೆಯಾಗಿರುವುದು ಖಚಿತವಾಗಿದ್ದರೆ, ಸೆಕ್ಷನ್ 49(ಎಂಎ) ಅಡಿ ಪ್ರಶ್ನಿಸಬಹುದು.ಆ ವ್ಯಕ್ತಿಯ ಅನುಮಾನ ಸತ್ಯವಾಗಿದ್ದಲ್ಲಿ ಅವರಿಗೆ ಮತ್ತೊಂದು ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಅವರು ಅನುಮಾನ ಸುಳ್ಳಾಗಿದ್ದರೆ ಐಪಿಸಿ ಸೆಕ್ಷನ್ 117 ಅಡಿ ವಿಚಾರಣೆಗೊಳಪಡಿಸಿ ಆರು ತಿಂಗಳವರೆಗೂ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಹೇಳಿದರು.

ಈ ರೀತಿ ಗುಜರಾತ್‍ನಲ್ಲಿ ಒಬ್ಬ ವ್ಯಕ್ತಿ ತಾನು ಚಲಾಯಿಸಿದ ಮತ ಬದಲಿ ವ್ಯಕ್ತಿಗೆ ಹೋಗಿದೆ ಎಂದು ಚುನಾವಣಾಧಿಕಾರಿಯನ್ನು ಪ್ರಶ್ನಿಸಿದರು. ಅವರ ದೂರನ್ನು ಪರಿಶೀಲಿಸಲಾಯಿತು. ಆತ ಹೇಳಿದ್ದು, ಸುಳ್ಳು ಎಂದು ಸಾಬೀತಾದ ನಂತರ ವಿಚಾರಣೆಗೊಳಪಡಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ಮತಯಂತ್ರಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ ಬಳಕೆ ಮಾಡಲಾಗುತ್ತದೆ. ಮೂರು ಹಂತದಲ್ಲಿ ಪರಿಶೀಲನೆ ನಡೆಯುತ್ತಿದ್ದು, ಮೊದಲ ಹಂತದ ಎಫ್‍ಎಲ್‍ಸಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ಈಗಾಗಲೇ ಐದಾರು ಜಿಲ್ಲೆಗಳಲ್ಲಿ ಎಫ್‍ಎಲ್‍ಸಿ ಆರಂಭವಾಗಿದೆ. ಎರಡನೇ ಹಂತದಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಮುಗಿದ ಬಳಿಕ ಅಭ್ಯರ್ಥಿಗಳು ಖಚಿತವಾದ ಮೇಲೆ ಪರಿಶೀಲನೆ ನಡೆಯಲಿದೆ. ಮೂರನೇ ಹಂತದಲ್ಲಿ ಮತದಾನಕ್ಕೂ ಮುನ್ನ 50 ವೋಟುಗಳು ಪರಿಶೀಲನೆ ನಡೆಯಲಿದೆ. ಈ ಮೂರೂ ಹಂತದಲ್ಲಿ ಯಾವುದೇ ಲೋಪಕಂಡುಬಂದರೂ ಚುನಾವಣಾ ಆಯೋಗ ತಕ್ಷಣ ಕ್ರಮಕೈಗೊಳ್ಳಲಿದೆ. ಎಲ್ಲಿಯೂ ಲೋಪಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಕೆಲ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ಮತ ಯಂತ್ರಗಳ ಸತ್ಯಾಸತ್ಯತೆ ಬಗ್ಗೆ ಅನುಮಾನ ಹುಟ್ಟಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಇದು ಸರಿಯಲ್ಲ. ಕಾನೂನಿನ ಪ್ರಕಾರ ಆ ರೀತಿ ಸುಳ್ಳು ಪ್ರಚಾರ ಮಾಡುವುದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಅವಕಾಶ ಮಾಡಿಕೊಡುತ್ತದೆ. ಆಯೋಗ ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಲಿದೆ ಮತ್ತು ಪ್ರಾಧಿಕಾರದ ಮುಂದೆಯೂ ಪ್ರಶ್ನಿಸಲಿದೆ ಎಂದು ಹೇಳಿದರು.

ರಾಜಕಾರಣಿಗಳು ಮಾಡುವ ಆರೋಪಗಳನ್ನು ಯಥಾವತ್ತಾಗಿ ಪ್ರಕಟಿಸಲು ಆಯೋಗದ ಅಭ್ಯಂತರವಿಲ್ಲ. ಆದರೆ ಸ್ವಯಂಪ್ರೇರಿತವಾಗಿ ಅಪನಂಬಿಕೆ ಹುಟ್ಟಿಸುವ ಕಾರ್ಯಕ್ರಮ ಮಾಡುವುದು ಸರಿಯಲ್ಲ. ಇದರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಇವಿಎಂಗಳ ಬಳಕೆ
ರಾಜ್ಯದ ಚುನಾವಣೆಗೆ 85,170 ಮತ ಯಂತ್ರಗಳು ಅಗತ್ಯವಿದ್ದು, ಅದರಲ್ಲಿ 70,190 ಮತ ಯಂತ್ರಗಳು ಬಂದಿವೆ. 70,990 ಮತ ಯಂತ್ರ ನಿಯಂತ್ರಕಗಳು ಅಗತ್ಯವಿದ್ದು, ಈಗಾಗಲೇ 22,210 ಬಂದಿವೆ. ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ ಸೇರಿ ಐದು ರಾಜ್ಯಗಳಿಂದಲೂ ಮತ ಯಂತ್ರ ತರಿಸಿಕೊಳ್ಳಲಾಗಿದೆ. ಜೊತೆಗೆ ಬೆಂಗಳೂರಿನ ಬಿಇಎಲ್ ಕೂಡ ಮತ ಯಂತ್ರಗಳನ್ನು ಸಿದ್ಧಪಡಿಸಿಕೊಡುತ್ತಿದೆ. ಪ್ರಮುಖವಾಗಿ ಮತಯಂತ್ರಗಳಿಗೆ ಅಳವಡಿಸಲು 73,850 ವಿವಿ ಪ್ಯಾಟ್‍ಗಳ ಅಗತ್ಯವಿದ್ದು, ಈಗಾಗಲೇ 56,290 ವಿವಿ ಪ್ಯಾಟ್‍ಗಳು ಬಂದಿವೆ. ಇವೆಲ್ಲವೂ ಹೊಸ ಯಂತ್ರಗಳಾಗಿದ್ದು, ಬಿಇಎಲ್ ತಯಾರಿಸಿದೆ. ಬಾಕಿ ಇರುವ 17,560 ವಿವಿ ಪ್ಯಾಟ್‍ಗಳಲ್ಲಿ ಬಿಇಎಲ್ ಇನ್ನು 4 ಸಾವಿರ ವಿವಿ ಪ್ಯಾಟ್ ತಯಾರಿಸಿ ನೀಡಲಿವೆ. ಇನ್ನೂ 13 ಸಾವಿರ ವಿವಿ ಪ್ಯಾಟ್‍ಗಳನ್ನು ಗುಜರಾತ್‍ನಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ದೇಶದಲ್ಲಿ ಅನಿಯಮಿತವಾದ ಮತ ಯಂತ್ರಗಳ ಲಭ್ಯತೆ ಇಲ್ಲ. ಒಟ್ಟು 2,56,463 ಮತ ಯಂತ್ರಗಳಿವೆ. 2,61,950 ಮತ ಯಂತ್ರ ನಿಯಂತ್ರಕಗಳಿವೆ. ಅವುಗಳಲ್ಲಿ ಕೆಲವು ಚುನಾವಣೆ ತಕರಾರಿನಿಂದಾಗಿ ಮರುಬಳಕೆಗೆ ಲಭ್ಯತೆ ಇಲ್ಲ. ಬಾಕಿ ಉಳಿದ ಮತಯಂತ್ರಗಳನ್ನು ಅನ್ಯ ರಾಜ್ಯಗಳಿಂದಲೇ ತರಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಕಿರುಹೊತ್ತಿಗೆಗಳ ಮುದ್ರಣಕ್ಕೆ ನಿಯಂತ್ರಣ:

ಪ್ರಕಾಶಕರ ಮತ್ತು ಮುದ್ರಕರ ಹೆಸರು ಮತ್ತು ಸಹಿ ಇಲ್ಲದೆ ಬೇಕಾಬಿಟ್ಟಿ ಚುನಾವಣೆ ಕಿರುಹೊತ್ತಿಗೆ ಮತ್ತು ಪೆÇೀಸ್ಟರ್‍ಗಳನ್ನು ಮುದ್ರಿಸಬಾರದು ಎಂದು ಆಯೋಗ ಕಟ್ಟಪ್ಪಣೆ ಮಾಡಿದೆ.

ಅನಧಿಕೃತವಾಗಿ ಮುದ್ರಣವಾದ ಕಿರುಹೊತ್ತಿಗೆಗಳು ಮತ್ತು ಪೆÇೀಸ್ಟರ್‍ಗಳು ಕಂಡು ಬಂದರೆ ಆರು ತಿಂಗಳು ಶಿಕ್ಷೆ ವಿಧಿಸಲು ಅವಕಾಶವಿದ್ದು, ಕ್ರಿಮಿನಲ್ ಮೊಕದ್ದಮೆ ಜಾರಿಗೊಳಿಸಿ ಗಂಭೀರ ಕ್ರಮಕೈಗೊಳ್ಲಲಾಗುವುದು ಎಂಧು ಎಚ್ಚರಿಕೆ ನೀಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ:

ಚುನಾವಣಾ ಆಯೋಗ ಈವರೆಗೂ ನಡೆಸಿರುವ ಮತದಾರರ ಪಟ್ಟಿ ಪರಿಷ್ಕರಣೆಯಿಂದಾಗಿ ರಾಝ್ಯದಲ್ಲಿ ಒಟ್ಟು 4,96,56,059 ಮತದಾರರಿದ್ದಾರೆ. ಅದರಲ್ಲಿ 2,51,79,219 ಪುರುಷರು, 2,44,72,288 ಮಹಿಳಾ ಮತದಾರರಿದ್ದಾರೆ. 4,552 ತೃತೀಯ ಲಿಂಗಿಗಳಿದ್ದಾರೆ.
ಬೆಂಗಳೂರಿನಲ್ಲಿ 46,04,190ಪುರುಷರು, 41,92,706 ಮಹಿಳಾ ಮತದಾರರು, 1,439 ತೃತೀಯ ಲಿಂಗಿಗಳು ಸೇರಿ ಒಟ್ಟು 87,98,335 ಮತದಾರರಿದ್ದಾರೆ. ಜಿಲ್ಲೆಗಳಲ್ಲಿ 2,05,75,029 ಪುರುಷರು, 2,02,79,582 ಮಹಿಳಾ ಮತದಾರರು, 3113 ತೃತೀಯ ಲಿಂಗಿಗಳು ಸೇರಿ 4,08,57,724 ಮತದಾರರಿದ್ದಾರೆ.
ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2.21 ಲಕ್ಷ ಮತದಾರರಿದ್ದಾರೆ. 2013ರ ಚುನಾವಣೆಯಲ್ಲಿ 1.83 ಲಕ್ಷ ಮತದಾರರಿದ್ದರು. 7,72,649 ಯುವ ಮತದಾರರು ಈ ಬಾರಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ.

ಪ್ರಥಮ ಬಾರಿಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದವರ ಸಂಖ್ಯೆ 15,42,000 ಗಳಾಗಿದೆ ಎಂದು ಹೇಳಿದರು.
ಹೊಸ ಮತ ಕೇಂದ್ರವನ್ನು ತಿಳಿದುಕೊಳ್ಳಲು 9731979899 ಎಸ್‍ಎಂಎಸ್ ಮಾಡಿ ತಿಳಿದುಕೊಳ್ಳಬಹುದಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ಅವಧಿಯವರೆಗೂ ಅರ್ಜಿ ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದರು.
ಚುನಾವಣಾ ಆಯೋಗದ ಜಂಟಿ ಆಯುಕ್ತ ರಮೇಶ್, ಉಪ ಆಯುಕ್ತ ರಾಘವೇಂದ್ರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ